ಮಾವುತರಿಗೆ ಉಪಹಾರ ಕೂಟ, ಮೈಸೂರು ಮೇಯರ್ ಕುದುರೆ ಸವಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.10- ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ನಡುವೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಿತ್ಯ ತಾಲೀಮು ನಡೆಸುತ್ತಿದ್ದು, ಮಾವುತರು, ಕಾವಾಡಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಉಪಹಾರಕೂಟ ಆಯೋಜಿಸಲಾಗಿತ್ತು.

ಆನೆಗಳ ಮಾವುತರು ಮತ್ತು ಕಾವಾಡಿಯ 26 ಕುಟುಂಬಗಳಿಗೆ ಜಿಲ್ಲಾಡಳಿತ ನವನೀತ್ ಕ್ಯಾಟರಿಂಗ್ ನಿಂದ ಉಪಹಾರ ವ್ಯವಸ್ಥೆ ಮಾಡಿತ್ತು. ಮಾವುತರು ಕಾವಾಡಿ ಕುಟುಂಬದವರು ಇಡ್ಲಿ ಸಾಂಬಾರ್, ಪೊಂಗಲ್ ಮಸಾಲ ವಡೆ ಹಾಗೂ ಉಪ್ಪಿಟ್ಟು ಸವಿದರು. ಉಪಹಾರ ಕೂಟದಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಶಾಸಕರಾದ ನಾಗೇಂದ್ರ , ಎಸ್.ಎ ರಾಮದಾಸ್ , ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು ಭಾಗಿಯಾಗಿದ್ದರು.

ಇದೇ ವೇಳೆ ಸಚಿವ ಸೋಮಣ್ಣರ ಸೋಮಣ್ಣ ಪ್ರತಿಷ್ಠಾನ ವತಿಯಿಂದ ತಲಾ ಐದು ಸಾವಿರ ರೂ ಅಂತೆ 20 ಮಾವುತರಿಗೆ 2 ಲಕ್ಷ ರೂ ಮೊತ್ತದ ಉಡುಗೊರೆ ನೀಡಲಾಯಿತು.  ದರೊಂದಿಗೆ ಜಿಲ್ಲಾಡಳಿತ ವತಿಯಿಂದಲೂ ಖಾಕಿ ಸಮವಸ್ತ್ರ, ಕೊಡೆ, ಜರ್ಕಿನ್ ಟೋಪಿ ,ನೀರಿನ ಬಾಟೆಲ್, ಟಾರ್ಚ್ ಲೈಟ್, ಹಾಗೂ ಉತ್ತಮ ದರ್ಜೆ ಶೂ ಗಳನ್ನ ಸಚಿವರು ವಿತರಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಡವಾಗಿ ಆಗಮಿಸಿದ ಹಿನ್ನೆಲೆ ಸಚಿವ ಸಿ.ಟಿ ರವಿ ಮಾವುತರ ಕುಟುಂಬಸ್ಥರ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಪ್ರತಿಯೊಬ್ಬ ಮಾವುತರ ಕಾವಾಡಿಗಳ ಹೆಸರು ವಿಳಾಸ ಪರಿಚಯಿಸಿಕೊಂಡರು.

#ಮೇಯರ್‌ನಿಂದ ಕುದುರೆ ತಾಲೀಮು


ಮೈಸೂರು,ಸೆ.10- ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಇದೇ ಮೊದಲ ಬಾರಿಗೆ ಕುದುರೆ ಏರಿ ಸುಮಾರು ಒಂದು ತಾಸು ತಾಲೀಮು ನಡೆಸಿದರು. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕುದುರೆ ಏರಲು ಮೇಯರ್ ಪುಷ್ಪಲತಾ ಜಗನ್ನಾಥ್ ಸಜ್ಜಾಗುತ್ತಿದ್ದು ಹೀಗಾಗಿ ಇಂದು ಮೈಸೂರಿನ ಮಟೆಡ್ ಪೊಲೀಸ್ ಮೈದಾನದಲ್ಲಿ ಒಂದು ತಾಸು ಕುದುರೆ ಸವಾರಿ ತಾಲೀಮು ಮಾಡಿದರು.

ಪುಷ್ಪಲತಾ ಜಗನ್ನಾಥ್ ಪ್ರತಿನಿತ್ಯ ಒಂದು ತಾಸು ತಾಲೀಮು ನಡೆಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಾರಂಭದಲ್ಲಿ ಕುದುರೆ ಏರಲು ಭಯವಾಗ್ತಿತ್ತು. ಬಳಿಕ ಅಧಿಕಾರಿಗಳು ಕೆಲ ಸಲಹೆಗಳನ್ನು ನೀಡಿ ಧೈರ್ಯ ತುಂಬಿದರು. ಕುದುರೆ ಸವಾರಿ ಒಳ್ಳೆಯ ಅನುಭವ, ಪ್ರತಿದಿನ ತಾಲೀಮಿನಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

Facebook Comments