ಮೈಸೂರು ದಸರಾ ಆಚರಣೆ ಕುರಿತು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಸರಾ ಉತ್ಸವ ಸಮಿತಿಯ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಸುಧಾಕರ್, ಜಿಲ್ಲಾಧಿಕಾರಿಗಳು, ಮೈಸೂರು ಮೇಯರ್ ಮುಂತಾದ ಮುಖಂಡರು ಪಾಲ್ಗೊಂಡು
ದಸರಾ ಆಚರಣೆ ಬಗ್ಗೆ ಚರ್ಚಿಸಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಕೂಡ ಸರಳವಾಗಿ ದಸರಾ ಆಚರಣೆ ಮಾಡುವ ಸಾಧ್ಯತೆ ಇದೆ. ಸಾಂಪ್ರದಾಯಿಕ ದಸರಾಕ್ಕೆ ಧಕ್ಕೆಯಾಗದಂತೆ ಸರಳವಾಗಿ ದಸರಾ ಆಚರಣೆ ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮೈಸೂರು, ಕೇರಳ ರಾಜ್ಯಕ್ಕೆ ಹೊಂದಿಕೊಂಡಂತಿದ್ದು, ಕೇರಳದಲ್ಲಿ ಪ್ರತಿದಿನ 30 ರಿಂದ 35 ಸಾವಿರ ಕೊರೊನಾ ಪ್ರಕರಣಗಳು ಕಂಡುಬರುತ್ತಿವೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು, ದಸರಾ ಆಚರಣೆಯನ್ನು ಅದ್ಧೂರಿಯಾಗಿ ಮಾಡಿದರೆ ದೇಶ-ವಿದೇಶಗಳಿಂದ ಜನ ಭಾರೀ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ವಿಶ್ವವಿಖ್ಯಾತ ದಸರಾಕ್ಕೆ 4 ರಿಂದ 5 ಲಕ್ಷ ಜನ ಆಗಮಿಸುವ ಸಾಧ್ಯತೆ ಇದೆ. ಕೋವಿಡ್-19 ಉಲ್ಬಣವಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸರಳ ಆಚರಣೆಯೇ ಸೂಕ್ತ ಎಂದು ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸುವ ಸಾಧ್ಯತೆ ಇದೆ.

ಇಂದು ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಚಿವರು, ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ದಸರಾವನ್ನು ಯಾವ ರೀತಿ ಆಚರಿಸಬೇಕೆಂಬ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧರಿಸಲಿದ್ದಾರೆ.

Facebook Comments