ಮೈಸೂರು ಗ್ಯಾಂಗ್‍ರೇಪ್ ಪ್ರಕರಣ : ಹೊರರಾಜ್ಯದಲ್ಲಿ ಕಾಮುಕರಿಗಾಗಿ ಪೊಲೀಸರ ಹುಟುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.26-ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.  ಘಟನಾ ಸ್ಥಳದಲ್ಲಿ ಲಭ್ಯವಾದ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕಾಮುಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕೆಲವು ಮಾಹಿತಿ ಪ್ರಕಾರ, ಕಾಮುಕರು ಹೊರರಾಜ್ಯದವರು ಎಂಬ ಬಗ್ಗೆ ಮಾಹಿತಿ ಲಭಿಸಿದ್ದು, ಅವರ ಬಂಧನಕ್ಕೆ ಈಗಾಗಲೇ ವಿಶೇಷ ಪೊಲೀಸ್ ತಂಡವೊಂದು ಹೊರರಾಜ್ಯಕ್ಕೂ ಪ್ರಯಾಣ ಬೆಳೆಸಿದೆ ಎಂದು ತಿಳಿದುಬಂದಿದೆ.

ಸಾಂಸ್ಕøತಿಕ ನಗರಿಗೆ ಕೆಟ್ಟ ಹೆಸರು ಬರುವಂತೆ ಮಾಡಿರುವ ಗ್ಯಾಂಗ್‍ರೇಪ್ ಹಗರಣದ ಆರೋಪಿಗಳನ್ನು ಬಂಧಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಪೊಲೀಸರಿಗೆ ಕಾಮುಕರ ಬಗ್ಗೆ ಸುಳಿವು ದೊರೆತಿದ್ದು, ಶೀಘ್ರ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗ್ಯಾಂಗ್‍ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಎಡಿಜಿಪಿ ಪ್ರತಾಪ್‍ರೆಡ್ಡಿ ಅವರು ಸಾಮೂಹಿಕ ಅತ್ಯಾಚಾರ ನಡೆದ ಲಲಿತಾದ್ರಿಪುರ ತಪ್ಪಲಿಗೆ ತೆರಳಿ ಪರಿಶೀಲನೆ ನಡೆಸಿದರು.

ಘಟನೆ ಬಗ್ಗೆ ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಂದ ಮಾಹಿತಿ ಪಡೆದು ಕಾಮುಕರನ್ನು ಶೀಘ್ರ ಬಂಧಿಸುವಂತೆ ಸೂಚನೆ ನೀಡಿದರು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಲು ಕಾಮುಕರಿಗೆ ಕೆಲ ಸ್ಥಳೀಯರು ಸಾಥ್ ನೀಡಿರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೆಲ ಸ್ಥಳೀಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ಸ್ನೇಹಿತ ಕಾಮುಕರಲ್ಲಿ ಕೆಲವರು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂಬ ಬಗ್ಗೆ ನೀಡಿರುವ ಮಾಹಿತಿ ಆಧರಿಸಿ ಸ್ಥಳೀಯ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೀಗಾಗಿ ಕೃತ್ಯ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳ ಫುಟೇಜ್ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಕಾಮುಕರು 25 ವರ್ಷದೊಳಗಿನವರಾಗಿದ್ದು, ಅಂದು ಸಂಜೆ 4 ರಿಂದ 7 ಗಂಟೆವರೆಗೆ ಚಾಮುಂಡಿಬೆಟ್ಟದ ಸುತ್ತಮುತ್ತ ಇರುವ ಬಾರ್‍ಗಳಿಂದ ಮದ್ಯ ಖರೀದಿಸಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ದೊರೆತಿರುವ ಬಿಯರ್ ಬಾಟಲ್‍ಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಲಾಗಿದೆ. ಈ ಎಲ್ಲ ಮಾಹಿತಿ ಆಧರಿಸಿ ಕಾಮುಕರ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಅವರ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

Facebook Comments