ಪಂಚರಾಜ್ಯಗಳ ಚುನಾವಣೆಗೆ ಮೈಸೂರಿನ ಮೈಲ್ಯಾಕ್ ಶಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು ,ಜ.17- ಪಂಚರಾಜ್ಯಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ ಬೇಡಿಕೆಯಂತೆ ಮೈಸೂರಿನ ಪ್ರತಿಷ್ಠಿತ ಮೈಲ್ಯಾಕ್ ಸಂಸ್ಥೆಯಿಂದ 5 ಲಕ್ಷ ಅಳಿಸಲಾಗದ ಶಾಯಿ ಬಾಟಲ್ ಕಳುಹಿಸಲಾಗುತ್ತಿದೆ. ಈ ಶಾಯಿಯು ಫೆ.10ರಿಂದ ಮಾ.10ರವರೆಗೆ ಉತ್ತರಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಳಸಲ್ಪಡಲಿದೆ.

ಚುನಾವಣಾ ಆಯೋಗದ ಬೇಡಿಕೆಯಂತೆ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅಲ್ಲಿಗೆ ಅಗತ್ಯವಿರುವ ಅಳಿಸಲಾಗದ ಶಾಯಿಯನ್ನು ಕಳುಹಿಸಲಾಗುತ್ತದೆ. 2021ರ ನವೆಂಬರ್‍ನಲ್ಲಿ ಉತ್ತರಪ್ರದೇಶದಿಂದ 10 ಸಿಸಿಯ 4 ಲಕ್ಷ ಬಾಟಲ್, ಪಂಜಾಬ್ ಗೆ 62 ಸಾವಿರ ಬಾಟಲ್, ಗೋವಾಗೆ 5 ಸಾವಿರ ಬಾಟಲ್, ಮಣಿಪುರಕ್ಕೆ 7,400 ಬಾಟಲ್ ಹಾಗೂ ಉತ್ತರಾ ಖಂಡ್ ಗೆ 30 ಸಾವಿರ ಬಾಟಲ್ ಸೇರಿದಂತೆ ಒಟ್ಟು 5,04,000 ಇಂಕ್ ಬಾಟಲ್ ಗೆ ಬೇಡಿಕೆ ಪಟ್ಟಿ ಬಂದಿದೆ.

ಅದರಂತೆ ಈಗಾಗಲೇ ಗೋವಾ, ಪಂಜಾಬ್, ಉತ್ರಾಖಂಡ್ ಮತ್ತು ಮಣಿಪುರಕ್ಕೆ ಅಳಿಸಲಾಗದ ಶಾಯಿ ಕಳುಹಿಸಲಾಗಿದೆ. ಇಂದು ಸಂಜೆಯೊಳಗಡೆ ಉತ್ತರ ಪ್ರದೇಶಕ್ಕೆ ಶಾಯಿ ಕಳುಹಿಸಲಾಗುತ್ತದೆ. ಇದರಿಂದ ಒಟ್ಟು 8.96 ಕೋಟಿ ವಹಿವಾಟನ್ನು ಮೈಲ್ಯಾಕ್ ಮಾಡಿದಂತಾಗಿದೆ.

ಮಾರ್ಕರ್ ಪೆನ್‍ಗೂ ಬೇಡಿಕೆ: ಭಾರತೀಯ ಚುನಾವಣಾ ಆಯೋಗವು ಮುಂದಿನ ದಿನಗಳಲ್ಲಿ ಇಂಕ್ ಬಾಟಲ್ ಬದಲಿಗೆ ಮಾರ್ಕರ್ ಪೆನ್ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದೆ. ಅವರ ಬೇಡಿಕೆಯಂತೆ ನಮ್ಮ ಸಂಸ್ಥೆಯು ಸುದೀರ್ಘ ಪ್ರಯೋಗ ನಡೆಸಿ ಗುಣಮಟ್ಟದ ಮಾರ್ಕರ್ ಪೆನ್ ತಯಾರಿಕೆಗೆ ಪ್ರಾಯೋಗಿಕ ಪರೀಕ್ಷೆ ಅಂತಿಮ ಹಂತದಲ್ಲಿದ್ದು, ಇದು ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಮೈಲ್ಯಾಕ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments