ಮೈಸೂರು ದಸರಾದಲ್ಲಿ ಈ ಬಾರಿಯೂ ಜಟ್ಟಿ ಕಾಳಗ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.25- ಮುಂದಿನ ಎರಡು ವಾರಗಳಲ್ಲಿ ಆರಂಭವಾಗಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಅಂಗವಾಗಿ ಪಾರಂಪರಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಅರಮನೆಯ ಪಾರಂಪರಿಕ ದಸರಾ ಕಾರ್ಯಕ್ರಮಗಳಿಗೂ ಚಾಲನೆ ದೊರೆಯಲಿದ್ದು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಜಟ್ಟಿ ಕಾಳಗಕ್ಕೆ ಬ್ರೇಕ್ ಹಾಕಲಾಗಿದೆ.

ಅ.1ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತಿರುವುದರಿಂದ ಅಂದು ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಸಲಾಗಿದೆ. ಅ.7ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.7ರಂದು ಅರಮನೆಯಲ್ಲಿ ಖಾಸಗಿ ದರ್ಬಾರ್‍ನಲ್ಲಿ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಸಿಂಹಾಸನ ಏರಿ ಔಪಚಾರಿಕವಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ.14ರಂದು ಅರಮನೆಯಲ್ಲಿ ಆಯುಧ ಪೂಜೆ ಅಂದು ಬೆಳಿಗ್ಗೆ 5.30ರಿಂದ ಆರಂಭಗೊಂಡು, 7.45ಕ್ಕೆ ರಾಜರ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುತ್ತಿದೆ. ಪೂಜೆ ನಂತರ ಅದನ್ನು ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗುವುದು. 11.02ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆಯನ್ನು ಮಹಾರಾಜರು ನೆರವೇರಿಸಲಿದ್ದಾರೆ.

ಅ.15ರಂದು ಅರಮನೆಯಲ್ಲಿ ವಿಜಯ ದಶಮಿ ಅಂಗವಾಗಿ ಬೆಳಗ್ಗೆ 5.45ಕ್ಕೆ ಆನೆ, ಕುದುರೆ, ಹಸುಗಳ ಆಗಮನವಾಗಲಿದೆ. 6.13 ರಿಂದ 6.32ರವರೆಗೆ ಪೂಜೆ, 7.20ರಿಂದ 7.40ರವರೆಗೆ ವಿಜಯದಶಮಿ ಮೆರವಣಿಗೆ ಅರಮನೆ ಮುಖ್ಯದ್ವಾರದಿಂದ ಭುವನೇಶ್ವರಿ ದೇಗುಲದವರೆಗೂ ನಡೆಯಲಿದೆ. ದೇಗುಲದ ಬನ್ನಿ ಮರಕ್ಕೆ ರಾಜರು ಪೂಜೆ ಸಲ್ಲಿಸಿಲಿದ್ದಾರೆ.

Facebook Comments