ಮೈಸೂರು ಲ್ಯಾಂಪ್ಸ್‌ ಭೂಮಿ ಸರ್ಕಾರದ ವಶಕ್ಕೆ ಪಡೆಯಲು ವಿಧಾನಪರಿಷತ್‍ನಲ್ಲಿ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ನಗರದ ಹೃದಯ ಭಾಗವಾದ ಯಶವಂತಪುರ ಮತ್ತು ಮಲ್ಲೇಶ್ವರಂ ಪ್ರದೇಶದಲ್ಲಿರುವ ಮೈಸೂರು ಲ್ಯಾಂಪ್ಸ್‍ನ 22 ಎಕರೆ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ನಡೆಸಿರುವ ಹುನ್ನಾರಕ್ಕೆ ಅವಕಾಶವಾಗದಂತೆ ಸರ್ಕಾರವೇ ನೇರವಾಗಿ ಭೂಮಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್‍ನಲ್ಲಿ ಪಕ್ಷಬೇಧ ಮರೆತು ಸದಸ್ಯರು ಒತ್ತಾಯಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, 1936ರಲ್ಲಿ ಸ್ಥಾಪನೆಯಾದ ಮೈಸೂರು ಲ್ಯಾಂಪ್ಸ್ ಕಾರ್ಖಾನೆಗೆ ಮೈಸೂರು ಮಹಾರಾಜರು 22 ಎಕರೆ ಭೂಮಿ ಕೊಟ್ಟಿದ್ದರು. ನಷ್ಟದ ಕಾರಣದಿಂದಾಗಿ 2002ರಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ ಎಂದು ವಿವರಿಸಿದರು.

ಉಪ ಪ್ರಶ್ನೆ ಕೇಳಿದ ಬಸವರಾಜ ಹೊರಟ್ಟಿ , ಕಾರ್ಖಾನೆಯ ಭೂಮಿಗೆ ಪ್ರತಿ ಎಕರೆಗೆ ಕನಿಷ್ಟ 10 ಕೋಟಿಯಿಂದ 30 ಕೋಟಿ ರೂ.ವರೆಗೂ ಬೆಲೆ ಇದೆ. ಅದನ್ನು ಸರ್ಕಾರ ನೇರವಾಗಿ ತನ್ನ ವಶಕ್ಕೆ ತೆಗೆದುಕೊಳ್ಳದೆ ಕಾರ್ಖಾನೆ ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ. ಕಂಪೆನಿಯವರು ತಮಗೆ ಬೇಕಾದವರಿಗೆ ಭೂಮಿ ಮಾರಾಟ ಮಾಡಿಕೊಳ್ಳುತ್ತಾರೆ. ಅಮೂಲ್ಯವಾದ ಭೂಮಿ ಅನ್ಯರ ಪಾಲಾಗಲು ಬಿಡಬಾರದು ಎಂದು ಒತ್ತಾಯಿಸಿದರು.

ಕಾರ್ಖಾನೆ ಮುಚ್ಚಿದ ಬಳಿಕ ಕಾರ್ಮಿಕರು ಹಾಗೂ ಇತರರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಆದ್ದರಿಂದಾಗಿ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು. ತಗಾದೆ ಇರುವುದು ಕಾರ್ಮಿಕರ ವಿಷಯಗಳಿಗೆ, ಭೂಮಿಗಲ್ಲ. ಬಹುಶಃ ಸಚಿವರಿಗೆ ಏನೂ ಗೊತ್ತಿಲ್ಲ. ಬೇರೆ ಯಾರೋ ರಿಮೋಟ್ ಒತ್ತುತ್ತಿದ್ದಾರೆ. ನಿಮ್ಮ ಕಾಲದಲ್ಲಿ ನೂರಾರು ಕೋಟಿ ರೂ. ಬೆಲೆ ಬಾಳುವ ಭೂಮಿ ಅನ್ಯರ ಪಾಲಾಗಲು ಬಿಡಬೇಡಿ. ಮುಂಬೈ ಮತ್ತು ಅಹಮದಾಬಾದ್‍ನಲ್ಲೂ ಕಾರ್ಖಾನೆಗೆ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ಇದೆ. ಎಲ್ಲವನ್ನೂ ಉಳಿಸಿ ಎಂದು ಮನವಿ ಮಾಡಿದರು.

ಇದಕ್ಕೆ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತಿತರರು ಧ್ವನಿಗೂಡಿಸಿದರು.  ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿ ಅವರು ಮಾತನಾಡಿ, 22 ಎಕರೆಯಲ್ಲಿ ಸರ್ಕಾರ ಏಮ್ಸ್ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

ಸಚಿವ ಸಂಪುಟ ಸಭೆ ಭೂಮಿಯನ್ನು ಮೈಸೂರು ಲ್ಯಾಂಪ್ಸ್ ಕಂಪೆನಿಗೆ ಬಿಟ್ಟು ಕೊಡಲು ನಿರ್ಧಾರ ತೆಗೆದುಕೊಂಡಿದೆ. ನಾನು ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮತ್ತು ಹಿರಿಯರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

Facebook Comments