ಮೈಸೂರು ಲ್ಯಾಂಪ್ಸ್ ಅಭಿವೃದ್ಧಿ ಪಡಿಸಲು ಟ್ರಸ್ಟ್ ನೋಂದಣಿ : ಸಚಿವ ಮುರುಗೇಶ್ ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.14- ಯಶವಂತಪುರದಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಭೂಮಿಯನ್ನು ಅಭಿವೃದ್ಧಿ ಪಡಿಸಲು ಬೆಂಗಳೂರು ಪಾರಂಪರಿಕ ಟ್ರಸ್ಟ್ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ವಿಧಾನ ಪರಿಷತ್‍ನಲ್ಲಿ ಜೆಡಿಎಸ್‍ನ ಸದಸ್ಯ ಕಾಂತರಾಜು ಅವರು ಕೇಳಿದ ಪ್ರಶ್ನೆಗೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಧ್ವನಿಗೂಡಿಸಿದರು. ಸರ್ಕಾರ ಮೈಸೂರು ಲ್ಯಾಂಪ್ಸ್ ಭೂಮಿಯನ್ನು ಮಾರಾಟ ಮಾಡುತ್ತಿಲ್ಲ, ಮಾರಾಟ ಮಾಡುವ ಉದ್ದೇಶವೂ ಇಲ್ಲ.

ಆ ಭೂಮಿಯಲ್ಲಿ ನಾಡಿನ ಕಲೆ, ಸಂಸ್ಕøತಿ ಹಾಗೂ ವೈವಿದ್ಯತೆಗಳ ಮಾಹಿತಿ ನೀಡುವ ಚಟುವಟಿಕೆ ಕೇಂದ್ರವನ್ನಾಗಿಸುವ ಉದ್ದೇಶವಿದೆ. ಈ ಚಟುವಟಿಕೆಗಾಗಿ ಸರ್ಕಾರ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸಲಾಗಿದೆ. ಸಮಿತಿಯಲ್ಲಿ ಏಳು ಮಂದಿ ಐಎಎಸ್ ಅಧಿಕಾರಿಗಳು ಹಾಗೂ ಐದು ಮಂದಿ ಹೊರಗಿನವರು ಸದಸ್ಯರಾಗಿದ್ದಾರೆ ಎಂದರು.

ಟ್ರಸ್ಟ್ ರಚನೆ ಮಾಡಿರುವುದರಿಂದ ಆ ಭೂಮಿ ದುರುಪಯೋಗವಾಗುವ ಸಾಧ್ಯತೆ ಇದೆ. ಟ್ರಸ್ಟ್ ನವರು ಕಟ್ಟಡ ನಿರ್ಮಿಸಿ ಬಾಡಿಗೆ ಕೊಡುತ್ತಾರೆ. ಟ್ರಸ್ಟ್‍ನಲ್ಲಿ ಸದಸ್ಯರು ಯಾರು, ಅಂಬಾನಿ, ಅದಾನಿಯವರಂತ ಶ್ರೀಮಂತರೆ ಎಂದು ಕಾಂತರಾಜು ಪ್ರಶ್ನಿಸಿದರು.

ಇದಕ್ಕೆ ಬೆಂಬಲ ವ್ಯಕ್ತ ಪಡಿಸಿದ ಎಸ್.ಆರ್.ಪಾಟೀಲ್, ಈ ಜಾಗ ಮೈಸೂರು ಮಹಾರಾಜರು ನೀಡಿದ್ದು, ಈಗ ರಚನೆಯಾಗಿರುವ ಟ್ರಸ್ಟ್ ಮುಂದೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ನೆಪವೊಡ್ಡಿ ಜಾಗವನ್ನು ಖಾಸಗಿಯವರಿಗೆ ಒಪ್ಪಿಸಿ ಬಿಡುವ ಆತಂಕವಿದೆ ಎಂದರು.

ಆ ಪ್ರದೇಶದ ಅಭಿವೃದ್ಧಿಗೆ ಸಮಗ್ರ ಯೋಜನೆ ಮತ್ತು ರೂಪುರೇಷೆ ತಯಾರಿಸಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಸದಸ್ಯರು ಅಗತ್ಯ ಸಲಹೆ ಸೂಚನೆ ನೀಡಬಹುದು ಎಂದು ಸಚಿವರು ಸಲಹೆ ನೀಡಿದರು. ಇದು ಗಂಭೀರವಾದ ವಿಷಯವಾಗಿದ್ದು, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಎಸ್.ಆರ್.ಪಾಟೀಲ್ ಮನವಿ ಮಾಡಿದಾಗ, ಅದಕ್ಕೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಅರ್ಧಗಂಟೆ ಕಾಲ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದರು.

Facebook Comments