ಸಾಂಸ್ಕøತಿಕ ನಗರಿ ಮೈಸೂರಿಗೆ ಜೆಡಿಎಸ್ ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.18- ಮೈಸೂರು ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿ ನಿರೀಕ್ಷೆಯಂತೆ ಜೆಡಿಎಸ್, ಕಾಂಗ್ರೆಸ್ ಪಾಲಾಗಿದ್ದು, ಮೇಯರ್ ಆಗಿ ಜೆಡಿಎಸ್ ಸದಸ್ಯೆ ತಸ್ಲೀಮಾ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಕಾಂಗ್ರೆಸ್‍ನ ಶ್ರೀಧರ್ ಅವರು ಆಯ್ಕೆಯಾಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಯಶವಂತ್ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸದಸ್ಯರು ಮತದಾನ ಮಾಡಿದರು.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದ್ದರೂ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನಿಂದ ತಸ್ಲೀಮ್, ಬಿಜೆಪಿಯಿಂದ ಗೀತಾಶ್ರೀ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಶ್ರೀಧರ್, ಬಿಜೆಪಿಯಿಂದ ಶಾಂತಮ್ಮ ವಡಿವೇಲು ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ತಸ್ಲೀಮಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಕಾಂಗ್ರೆಸ್‍ನ ಶ್ರೀಧರ್ ಉಪಮೇಯರ್ ಆಗಿ ಚುನಾಯಿತರಾದರು.
65 ಸದಸ್ಯಬಲದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‍ಪಿ 1 ಮತ್ತು ಪಕ್ಷೇತರರು 5 ಮಂದಿ ಇದ್ದಾರೆ.

ಇವರೊಂದಿಗೆ ಜೆಡಿಎಸ್-ಕಾಂಗ್ರೆಸ್‍ನ ನಾಲ್ವರು ಶಾಸಕರು, 4 ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿಯ ಸಂಸದರು ಸೇರಿ ಒಟ್ಟು 73 ಮಂದಿ ಮತದಾನದ ಹಕ್ಕು ಹೊಂದಿದ್ದು, ಬಹುಮತ ಪಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಡಿದುಕೊಂಡರೂ ಈ ಹಿಂದೆ ನಡೆದ ಮಾತುಕತೆಯಂತೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿವೆ.

Facebook Comments