ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕ-ಯುವತಿಯರಿಗೆ ಬುದ್ಧಿ ಹೇಳಿದ ಖಾಕಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.9- ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ, ಯುವಕರು ಮೋಜು ಮಸ್ತಿಗೆ ತೆರಳಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಅವರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಯುವ ಸಮುದಾಯಕ್ಕೆ ಇಂತಹ ಭೀಕರ ಪ್ರಕರಣದ ಗಂಭೀರತೆ ಅರಿವಿಲ್ಲದಿರುವುದು ಮಾತ್ರ ವಿಪರ್ಯಾಸ.

ಮೊನ್ನೆ ಸಂಜೆ 7 ಗಂಟೆ ಸುಮಾರಿಗೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ (ಹೊರ ರಾಜ್ಯದ ನೋಂದಣಿ ಕಾರು) ಬಂದ ಮೂವರು ಯುವಕರು ಹಾಗೂ ಓರ್ವ ಯುವತಿ ಮದ್ಯದ ಬಾಟಲಿಗಳ ಜತೆಗೆ ಕಾರಿನಿಂದ ಇಳಿದು ತೆರಳುತ್ತಿರುವುದನ್ನು ದಾರಿಹೋಕರು ಗಮನಿಸಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಫೋನ್ ಕರೆಯನ್ನಾಧರಿಸಿ ಆಲನಹಳ್ಳಿ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ, ನಿರ್ಜನ ಪ್ರದೇಶದಲ್ಲಿದ್ದ ಯುವತಿ ಹಾಗೂ ಯವಕರನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ.

ಆಘಾತಕಾರಿ ವಿಷಯವೇನೆಂದರೆ ಈ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದವರಾಗಿದ್ದು, ಮೋಜು ಮಸ್ತಿಗಾಗಿ ನಿರ್ಜನ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಸಾರ್ವಜನಿಕರ ಫೋನ್ ಕರೆ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ ಬಳಿಕ, ಪೊಲೀಸರು ಅವರ ಫೋಷಕರಿಗೂ ಕರೆ ಮಾಡಿ ಮಾಹಿತಿ ನೀಡಿ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಮೈಸೂರು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಖುದ್ದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರೇ ರಿಂಗ್ ರಸ್ತೆಗಳ ಬಳಿ ಹಾಗೂ ನಗರದ ಹೊರ ವಲಯದ ನಿರ್ಜನ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿರುವುದು ಗಂಭೀರತೆಗೆ ಸಾಕ್ಷಿಯಾಗಿದೆ. ಪೊಲೀಸರಿಗೆ ಪೂರಕವಾಗಿ ಸಾರ್ವಜನಿಕರು, ಇಂತಹ ಘಟನೆಗಳನ್ನು ಕಂಡ ಕೂಡಲೇ ಮಾಹಿತಿ ನೀಡುವ ಮೂಲಕ ಸಹಕರಿಸಿದರೆ ಮುಂದಾಗುವ ಅಪಾಯ ತಪ್ಪಿಸಬಹುದಾಗಿದೆ.

Facebook Comments