ಧಾರಾಕಾರ ಮಳೆಗೆ ಮೈಸೂರು ತತ್ತರ, ಕೆಎಸ್ಆರ್‌ಟಿಸಿ ಬಸ್’ಗೆ ಪಾದಚಾರಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.21- ನಗರದಲ್ಲಿ ನಿನ್ನೆ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮೈಸೂರು ಅಕ್ಷರಶಃ ತತ್ತರಗೊಂಡಿದೆ. ಸಿಡಿಲಿನೊಂದಿಗೆ ಆರಂಭವಾದ ಮಳೆಯು ತಡರಾತ್ರಿಯವರೆಗೂ ಬಿಟ್ಟು ಬಿಟ್ಟು ಸುರಿಯುತ್ತಲೇ ಇತ್ತು. ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಜಯಪುರ ಸಮೀಪ ಕೆಎಸ್ಆರ್‌ಟಿಸಿ ಬಸ್ ಒಂದು ಸುರಿಯುತ್ತಿದ್ದ ಮಳೆಯ ನಡುವೆಯೇ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯರು ಸುತ್ತುವರಿಯುತ್ತಿದ್ದಂತೆಯೇ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದು, ಬಸ್ ರಸ್ತೆಯಲ್ಲಿಯೇ ನಿಂತ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಗೆ ಚಾಮುಂಡಿಬೆಟ್ಟದ ನಂದಿಮಾರ್ಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ದಸರಾ ಪ್ರಯುಕ್ತ ಬೆಟ್ಟದಲ್ಲಿ ಅಳವಡಿಸಿರುವ ಸುಸ್ವಾಗತ ವಿದ್ಯುತ್ ದೀಪಗಳ ಫಲಕದ ಬಳಿ ಭೂ ಕುಸಿತವಾಗಿದೆ. ರಸ್ತೆ ಬದಿಯ ತಡೆಗೋಡೆ ಸೇರಿದಂತೆ ರಸ್ತೆಯ ಕೆಲಭಾಗ ಕುಸಿದಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಪ್ರದೇಶದಲ್ಲಿ ಯಾರೂ ಸಹ ಸಂಚರಿಸಬಾರದೆಂದು ಸೂಚಿಸಲಾಗಿದೆ.

ಹೆಬ್ಬಾಳದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು. ಮೈಸೂರಿನ ವಿಜಯ ಬ್ಯಾಂಕ್ ಸರ್ಕಲ್‍ನ ವಿಶ್ವ ಮಾನವ ಜೋಡಿ ರಸ್ತೆ ಬಳಿ ಇರುವ ಪೆಟ್ರೋಲ್ ಬಂಕ್‍ನ ಕಟ್ಟಡ ಕುಸಿತಗೊಂಡಿದ್ದು, ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರಕಾರವಾಗಿ ಸುರಿದ ಮಳೆಯಿಂದ ಜನತಾನಗರದ ತಗ್ಗುಪ್ರದೇಶಗಳಲ್ಲಿ ರುವ ಮನೆಗಳಿಗೆ, ಗಂಗೋತ್ರಿ ಬಡಾವಣೆಯ ಕೆಲವು ಮನೆಗಳು, ದಟ್ಟಗಳ್ಳಿ, ಪಡುವಾರಹಳ್ಳಿಯ ಕೆಲವು ಮನೆಗಳಿಗೂ ನೀರು ನುಗ್ಗಿ, ನಿವಾಸಿಗಳು ತೊಂದರೆ ಅನುಭವಿಸಿದರು. ಅಶೋಕ ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ಹರಿದಿದ್ದು, ಕೆಲವು ದ್ವಿಚಕ್ರವಾಹನ ಸವಾರರು ಪರದಾಡುವಂತಾಯಿತು.

ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್‍ಗಳು ನೀರಿನಲ್ಲಿ ಮುಳುಗಿದ್ದು, ಬೈಕ್‍ಗಳನ್ನು ತರಲು ಹರಸಾಹಸಪಡುತ್ತಿರುವುದು ಕಂಡು ಬಂತು.
ದೇವರಾಜ ಅರಸು ರಸ್ತೆ, ಸಯ್ಯಾಜಿರಾಬ್ ರಸ್ತೆ, ಬನ್ನಿಮಂಟಪ ರಸ್ತೆ, ಕುವೆಂಪುನಗರ, ರಾಮಕೃಷ್ಣನಗರ, ಸಿದ್ಧಾರ್ಥ ನಗರದ ಆಲನಹಳ್ಳಿ ಬಡಾವಣೆ, ಎಸ್ ಆರ್ ಮೊಹಲ್ಲಾ, ಉದಯಗಿರಿ, ಮಹದೇವಪುರ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‍ಬಿ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು, ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.

ಭಾರಿ ಮಳೆ ಹಿನ್ನೆಲೆಯಲ್ಲಿ ದಸರಾ ದೀಪಾಲಂಕಾರವನ್ನು ಕೆಲವು ಕಡೆ ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಸರ್ಕಾರಿ ರಜೆ ಇದ್ದ ಕಾರಣ ದೀಪಾಲಂಕಾರ ನೋಡಲು ಬಂದವರು ನಿರಾಶೆಗೊಂಡರು. ಪಾಲಿಕೆಯ ಅಭಯ್ ರಕ್ಷಣಾ ತಂಡವು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿತ್ತು.

Facebook Comments