ರಾಜ್ಯದಲ್ಲಿ ನವೆಂಬರ್ ತಿಂಗಳಿನಿಂದ ಕಾಲೇಜುಗಳು ಪ್ರಾರಂಭ..?

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.19- ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ಶಾಲಾಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ರಾಜ್ಯದಲ್ಲಿ ನವೆಂಬರ್ ತಿಂಗಳಿನಿಂದ ತೆರೆಯಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಕಾಲೇಜುಗಳನ್ನು ಪುನರಾಂಭಿಸಲು ಯುಜಿಸಿ ಎಲ್ಲಾ ರಾಜ್ಯಗಳಿಗೆ ಅನುಮತಿ ಕೊಟ್ಟಿದೆ. ಆಯಾ ರಾಜ್ಯಗಳೇ ಅಂತಿಮ ನಿರ್ಧಾರ ಕೈಗೊಳ್ಳಲು ಸೂಚನೆ ಕೊಟ್ಟಿರುವುದರಿಂದ ನವೆಂಬರ್‍ನಲ್ಲಿ ಪ್ರಾರಂಭಿಸುವ ಕುರಿತು ಸರ್ಕಾರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ತಜ್ಞರು ಹಾಗೂ ವಿವಿಧ ವಲಯದ ಗಣ್ಯರ ಜೊತೆ ಪೋಷಕರು ಮತ್ತು ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬ ಆಶ್ವಾಸನೆ ನೀಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಬರ ಇದ್ದಾಗ ಸ್ಪಂದಿಸದ ಸಿದ್ದರಾಮಯ್ಯ ಅವರು ಈಗ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಅವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.  ಈ ಹಿಂದೆ ಬರವಿದ್ದಾಗಲೇ ಸಿದ್ದರಾಮಯ್ಯ ಸ್ಪಂದಿಸಿರಲಿಲ್ಲ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಿರಾ ಮತ್ತು ಆರ್‌ಆರ್‌ನಗರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರತಿಷ್ಠೆ ಬಗ್ಗೆ ಮಾತನಾಡುವವರಿಗೆ ಎರಡು ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಅವರವರೇ ಕಚ್ಚಾಡುತ್ತಿದ್ದಾರೆ. ಹೇಗೋ ಬೇಕೋ ಹಾಗೆ ಮಾತನಾಡುತ್ತಾ ಪಕ್ಷದ ಒಳಜಗಳವನ್ನು ಅವರೇ ಬಯಲು ಮಾಡುತ್ತಿದ್ದಾರೆ ಎಂದರು.

ಜನರನ್ನು ಭಾವಾನಾತ್ಮಕವಾಗಿ ಸೆಳೆಯಲು ವಿಪಕ್ಷಗಳು ಮುಂದಾಗಿವೆ. ಆಗ ಜನರಿಗೆ ಸ್ಪಂದಿಸದವರು ಈಗ ಮಾತನಾಡುತ್ತಿದ್ದಾರೆ. ಇವರ ತಪ್ಪುಗಳು ಜನರಿಗೆ ಗೊತ್ತಿದೆ ಎಂದರು.
ಜೊತೆಯಲ್ಲಿದ್ದವರೇ ಎಚ್‍ಡಿಕೆಗೆ ಬೆನ್ನಿಗೆ ಚೂರಿ ಹಾಕಿ ಬೇರೆ ಪಕ್ಷದತ್ತ ಮುಖ ಮಾಡಿದವರು ಯಾರೆಂದು ಅವರಿಗೆ ಗೊತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅಶ್ವಥ್ ನಾರಾಯಣ ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Facebook Comments