ಬೆಂಗಳೂರನ್ನು ಬೆಚ್ಚಿಬೀಳಿಸಿದ ಭಯಂಕರ ಶಬ್ದದ ರಹಸ್ಯ ಇಲ್ಲಿದೆ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 20- ನಗರದ ಹಲವು ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ ಭಾರೀ ಶಬ್ದ ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು. ಈ ಶಬ್ದಕ್ಕೆ ಸುಖೋಯ್(ಎಸ್‍ಯು30) ಯುದ್ಧ ವಿಮಾನದ ಸದ್ದು ಎಂದು ತಿಳಿದುಬಂದಿದೆ. ಶಬ್ದಕ್ಕಿಂತ ಹೆಚ್ಚು ವೇಗವಾಗಿ ಚಲಿಸುವಂತಹ ಭಾರತೀಯ ವಾಯುಪಡೆಯ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ದವಿಮಾನದ ಶಬ್ದವಾಗಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನ 1.20ರಿಂದ 1.30ರ ಗಂಟೆಯಲ್ಲಿ ಹೆಚ್‍ಎಸ್‍ಆರ್ ಲೇಔಟ್, ಮಾರ್ತಹಳ್ಳಿ, ಸಿ.ವಿ.ರಾಮನಗರ, ವರ್ತೂರು, ಕುಂದಲಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹಲಸೂರು, ವೈಟ್‍ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ ಸೇರಿದಂತೆ ಹಲವು ಕಡೆ ಭಾರೀ ಶಬ್ದ ಕೇಳಿ ಬಂದಿತು.

ಬೆಂಗಳೂರಿನಲ್ಲಿ ಭೂಮಿ ಕಂಪಿಸಿರುವುದು ಭೂಕಂಪನ ಮಾಪಕಗಳಲ್ಲಿ ದಾಖಲಾಗಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೇಳಿಬಂದಿರುವ ಶಬ್ದಕ್ಕೆ ಬೇರೆ ಕಾರಣ ಇರಬಹುದು. ನಮ್ಮ ಸಂಸ್ಥೆಯ ಸೆನ್ಸಾರ್‍ಗಳಲ್ಲಿ ಭೂಮಿ ಕಂಪಿಸಿರುವ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭೂಕಂಪನ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಪ್ರಮಾಣ ವ್ಯಾಪಕವಾಗಿರುತ್ತದೆ. ಅಂತಹ ಲಕ್ಷಣಗಳು ಸದ್ಯಕ್ಕೆ ಕಂಡುಬಂದಿಲ್ಲ. ಶಬ್ದದ ಬಗ್ಗೆ ಸಾಕಷ್ಟು ಕರೆಗಳು ಬಂದಿವೆ. ಹಲವಾರು ಮಂದಿ ಭಾರಿ ಶಬ್ದ ಕೇಳಿಸಿದೆ ಎಂದಿದ್ದಾರೆ, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನಗರದ ಕೆಲವೆಡೆ ಕೇಳಿ ಬಂದಿರುವ ಶಬ್ದದಿಂದ ಜನತೆ ಭಯಪಡುವ ಅಗತ್ಯವಿಲ್ಲ.ಇದು ಭೂಕಂಪನ ಅಲ್ಲ. ಕಲ್ಲು ಕ್ವಾರಿಗಳಲ್ಲಿ ಬಳಸುವ ಸ್ಫೋಟಕ ವಿರಬಹುದು. ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿತವಾಗುವುದರಿಂದ ಭೂಮಿಯ ಒಳಪದರದಲ್ಲಿ ವ್ಯತ್ಯಾಸ ಉಂಟಾಗಿರಬಹುದು.

ಇಲ್ಲವೇ ಪೆಟ್ರೋಲ್ ಉತ್ಪನ್ನಗಳಿಂದ ಈ ರೀತಿಯ ಶಬ್ದಗಳು ಕೇಳಿಬಂದಿರಬಹುದು ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.  ಸದ್ದಿನಿಂದ ಇದುವರೆಗೆ ಯಾವುದೇ ಹಾನಿಯಾಗಿಲ್ಲ. ಶಬ್ದದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Facebook Comments

Sri Raghav

Admin