ಕೇವಲ 10ನೇ ತರಗತಿ ಪಾಸಾದವರು ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಬಹುದೇ..?

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.26- ಕೇವಲ 10ನೆ ತರಗತಿ ಪಾಸಾದವರು ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಬಹುದೇ..? ಇಲ್ಲ. ಆದರೂ ಮೈಸೂರಿನ ಮಹಾನಗರ ಪಾಲಿಕೆಯಲ್ಲಿ ಇದು ಸಾಧ್ಯವಾಗಿದೆ.

10ನೆ ತರಗತಿ ಪಾಸಾದ ಸಿಬ್ಬಂದಿ ಅರ್ಹತೆ ಇಲ್ಲದಿದ್ದರೂ ಪ್ರಭಾರ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಹೇಶ್ ಎಂಬ ವ್ಯಕ್ತಿ ಎಸ್‍ಎಸ್‍ಎಲ್‍ಸಿಯಲ್ಲಿ 600 ಅಂಕಗಳಿಗೆ ಕೇವಲ 213 ಅಂಕ ಪಡೆದು ರಿಪೀಟರ್ ಆಗಿ ಪಾಸಾಗಿದ್ದರು.

ಇಂತಹವರನ್ನೇ ಸಹಾಯಕ ಕಮಿಷನರ್ ಆಗಿ (ಪ್ರಭಾರ) ಮೈಸೂರು ಮಹಾನಗರ ಪಾಲಿಕೆ ನೇಮಿಸಿದೆ. ಪಾಲಿಕೆಯ ವಲಯ ಕಚೇರಿ 9ರಲ್ಲಿ ಮಹೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ಆಯುಕ್ತರಾಗಿ ನೇಮಕವಾಗಬೇಕಾದರೆ ಕೆಎಎಸ್ ಕಿರಿಯ ಶ್ರೇಣಿ ಅಥವಾ ಕೆಎಂಎಎಸ್ ಗ್ರೇಡ್-2 ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ.

ಆದರೆ, ಇಂತಹ ನಿಯಮವನ್ನೂ ಉಲ್ಲಂಘಿಸಿ ಕೇವಲ ಎಸ್‍ಎಸ್‍ಎಲ್‍ಸಿ ಪಾಸಾಗಿರುವ ಮಹೇಶ್‍ಗೆ ಈ ಅಧಿಕಾರ ನೀಡಿರುವವರು ಯಾರು ಎಂಬುದು ಮಾತ್ರ ತಿಳಿದುಬಂದಿಲ್ಲ.ಈಗಾಗಲೇ ಹಲವಾರು ವರ್ಷಗಳು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಮಹೇಶ್ ಬಗ್ಗೆ 2012ರಲ್ಲೇ ಇವರಿಗೆ ಸಹಾಯಕ ಕಮಿಷನರ್ ಹುದ್ದೆ ಅಲಂಕರಿಸಲು ಅರ್ಹತೆ ಇದೆಯೇ ಎಂಬ ಕುರಿತು ಹೋರಾಟಗಾರರಾದ ಭಾನುಮೋಹನ್ ಅವರು ಆರ್‍ಟಿಐ (ಮಾಹಿತಿ ಹಕ್ಕಿನಡಿ) ದಾಖಲೆ ಪಡೆದಾಗ ಅದು ಖಚಿತವಾಗಿದೆ.

ನಂತರ ಇವರ ಅರ್ಹತೆ ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಏಳು ವರ್ಷ ಕಳೆದರೂ ಇನ್ನೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳು ಸಹ ಈ ಬಗ್ಗೆ ಮಾಹಿತಿ ನೀಡಲು ಪಾಲಿಕೆಗೆ ಸೂಚಿಸಿದ್ದರೂ ಇದುವರೆಗೂ ಉತ್ತರ ದೊರೆತಿಲ್ಲ.

ಈ ಅವಧಿಯಲ್ಲಿ ಮಹೇಶ್ ಬೇರೆಡೆಗೆ ವರ್ಗವಾಗಿದ್ದು, ಏಳು ವರ್ಷಗಳ ನಂತರ ಮೈಸೂರಿನ ಪಾಲಿಕೆಯಲ್ಲಿ ಪ್ರಭಾರ ಸೂಪರಿಂಟೆಂಡೆಂಟ್ ಆಗಿ ನೇಮಕವಾಗಿದ್ದಾರೆ. ಪ್ರತಿ ನೇಮಕಾತಿಯಲ್ಲೂ ಎಲ್ಲ ದಾಖಲೆ ಪರೀಕ್ಷಿಸಿ ನಂತರವೇ ನೇಮಕ ಮಾಡುವ ನಿಯಮವಿದ್ದರೂ ಇವರ ನೇಮಕಾತಿ ಹೇಗಾಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin