ಮೈಸೂರಲ್ಲಿ ಸರಳ ದಸರಾ ಸಂಭ್ರಮ (LIVE)

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.26- ಕೊರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸರಳ ಹಾಗೂ ಸಾಂಪ್ರದಾಯಿಕವಾಗಿ ವರ್ಚುಯಲ್ ನಾಡ ಹಬ್ಬ ದಸರಾ ಆಚರಿಸಲಾಯಿತು. 410ನೇ ಮೈಸೂರು ದಸರಾ ಮಹೋತ್ಸವವನ್ನು ಇಂದು ಆರಮನೆ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಬಾರಿ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದಸರಾ ಜನಾಕರ್ಷಣಿಯಾದ ಜಂಬೂ ಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಪ್ರತಿವರ್ಷ 5 ಕಿ.ಮೀ. ಕ್ರಮಿಸುತ್ತಿದ್ದ ಜಂಬೂ ಸವಾರಿ ಈ ಬಾರಿ ಕೇವಲ 400 ಮೀಟರ್‍ಗೆ ನಿಗದಿಪಡಿಸಲಾಗಿತ್ತು.

ಇಂದು ಮಧ್ಯಾಹ್ನ 2.59 ರಿಂದ 3.20 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಶ್ರದ್ಧಾಭಕ್ತಿಯಿಂದ ವಿಜಯದಶಮಿಯ ಆಚರಣೆ ನಡೆದಿದೆ.

ಜನರು ಎಲ್ಲಾ ಸಂಕಷ್ಟಗಳಿಂದ ಮುಕ್ತಗೊಂಡು ನೆಮ್ಮದಿಯ ಜೀವನ ನೆಲೆಸುವಂತಾಗಲಿ. ಕೋವಿಡ್ ಹಾಗೂ ಬೇರೆ ಬೇರೆ ಕಾರಣಗಳಿಗೋಸ್ಕರ ಬಹಳ ಸರಳವಾಗಿ ದಸರಾ ಮತ್ತು ಜಂಬೂ ಸವಾರಿ ಮಾಡುತ್ತೇವೆ. ಜನರು ನೆಮ್ಮದಿಯಿಂದ ಬದುಕುವ ಒಳ್ಳೆ ಕಾಲವನ್ನು ತಾಯಿ ಚಾಮುಂಡೇಶ್ವರಿ ನೀಡಲಿ. ಮುಂದಿನ ವರ್ಷ ಅದ್ಧೂರಿಯಾಗಿ ದಸರಾ ಆಚರಣೆ ಮಾಡೋಣ ಎಂದು ಹೇಳಿದರು.

ಅದ್ಧೂರಿ ವೈಭವಗಳಿಲ್ಲದಿದ್ದರೂ ಸಂಪ್ರದಾಯಕ್ಕೆ ಕೊರತೆ ಇಲ್ಲದೆ ಸರಳವಾಗಿ ದಸರಾ ಆಚರಣೆ ಮಾಡಲಾಗಿದೆ. ರಾಜ್ಯಕ್ಕೆ, ದೇಶಕ್ಕೆ, ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಸೋಂಕನ್ನು ತಾಯಿ ಚಾಮುಂಡೇಶ್ವರಿ ತೊಲಗಿಸಲಿ ಎಂದು ಪ್ರಾರ್ಥಿಸುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ತಿಳಿಸಿದರು.

ನಂತರ ಅರಮನೆ ಆವರಣದಲ್ಲಿ 3.40ರಿಂದ 4.15ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಯಡಿಯೂರಪ್ಪನವರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನಾಡ ಅದಿದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರೆದಿದ್ದ ಜನ ಜಯಘೋಷ ಮೊಳಗಿಸಿದರು. ಕೊರೊನಾ ತೊಲಗಿಸುವಂತೆ ಪ್ರಾರ್ಥಿಸಿದರು.

ಕೊರೊನಾ ಕಾರಣದಿಂದ ಈ ವರ್ಷ ಕೇವಲ 2 ಸ್ಥಬ್ಧ ಚಿತ್ರಗಳು 5 ಕಲಾತಂಡಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19 ಗೆ ಸಂಬಂಸಿದ ಸ್ಥಬ್ಧ ಚಿತ್ರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮೈಸೂರು ಅರಮನೆ ವೈಭವ ಬಿಂಬಿಸುವ ಸ್ತಬ್ಧ ಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಸಾಗಿ ಬಂದವು.

ಈ ಸ್ತಬ್ಧ ಚಿತ್ರಗಳೊಂದಿಗೆ 5 ಕಲಾತಂಡಗಳು ಮೆರವಣಿಗೆಯಲ್ಲಿ ಸಾಥ್ ನೀಡಿದವು. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಆನೆ ಅಭಿಮನ್ಯುವಿನೊಂದಿಗೆ ವಿಜಯ ಹಾಗೂ ಸರಳ ಕುಂಮ್ಕಿ ಆನೆಗಳು ಹೆಜ್ಜೆ ಹಾಕಲಿವೆ . ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಿದ್ದ ಜಂಬೂ ಸವಾರಿ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ತಸ್ನೀಂ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೂಡಾಧ್ಯಕ್ಷ ಎಚ್.ವಿ. ರಾಜೀವ್ ಮಾಜಿ ಸಚಿವ ಎಚ್. ವಿಜಯಶಂಕರ್ ಸೇರಿದಂತೆ 300 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅರಮನೆಯ ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.

ಪ್ರತಿವರ್ಷ ಜಂಬೂ ಸವಾರಿ ಮೆರವಣಿಗೆಯ ನಂತರ ಬನ್ನಿ ಮಂಟಪ ಮೈದಾನದಲ್ಲಿ ಪಂಜಿನ ಕವಾಯಿತು ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಟಾರ್ಚ್‍ಲೈಟ್ ಪೆರೆಡನ್ನು ರದ್ದುಗೊಳಿಸಲಾಗಿತ್ತು.

ಪ್ರತಿವರ್ಷ ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಹೊರಟು ಬನ್ನಿಮಂಟಪದವರೆಗೆ ಸಾಗಲು 3 ಗಂಟೆ ಕಾಲಾವಕಾಶ ಬೇಕಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ ಸಹಸ್ರಾರು ಜನ ನಿಂತು ಜಂಬೂ ಸವಾರಿಯನ್ನು ವೀಕ್ಷಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಜಂಬೂ ಸವಾರಿ ಅರಮನೆಗೆ ಸೀಮಿತವಾಗಿದ್ದರಿಂದ ಕೇವಲ 30 ರಿಂದ 45 ನಿಮಿಷಗಳಲ್ಲಿ ಪೂರ್ಣಗೊಂಡಿತು.

 

 

 

 

Facebook Comments

Sri Raghav

Admin