ಮತ್ತೊಂದು ದಾಖಲೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Yoga--01

ಮೈಸೂರು, ಜೂ.10- ಯೋಗದಲ್ಲಿ ಮತ್ತೊಂದು ದಾಖಲೆ ಸರಿಗಟ್ಟಲು ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧವಾಗಿದೆ. ಇದೇ ತಿಂಗಳ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯೋಗ ಪಟುಗಳು ಗಿನ್ನಿಸ್ ದಾಖಲೆಗೆ ಸಿದ್ಧರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಭಾನುವಾರ ಮೈಸೂರು ಅರಮನೆ ಆವರಣದಲ್ಲಿ ನೂರಾರು ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡಿದ್ದರೆ, ಇಂದು ಬೆಳಗ್ಗೆ ಸಾವಿರಾರು ಮಂದಿ ಪೂರ್ವ ಯೋಗಾಭ್ಯಾಸವನ್ನು ಮಾಡಿದರು.  ಮೈಸೂರು ಅರಮನೆಯ ಆವರಣದಲ್ಲಿ ಬೆಳಗ್ಗೆ 7 ಗಂಟೆಗೆ ವಿವಿಧ ಯೋಗ ಸಂಘ-ಸಂಸ್ಥೆಗಳ ಸಾವಿರಾರು ಮಂದಿ ಪೂರ್ವಾಭ್ಯಾಸ ನಡೆಸಿದ್ದಾರೆ.

ಹಲವು ಯೋಗ ಭಂಗಿಗಳನ್ನು ಅಭ್ಯಸಿಸುವ ಮೂಲಕ ಪೂರ್ವಯೋಗಾಭ್ಯಾಸ ನಡೆಸಿದ್ದಾರೆ. ಕಳೆದ ವರ್ಷ 56 ಸಾವಿರ ಮಂದಿ ಯೋಗಪಟುಗಳು ಸೇರಿ ಗಿನ್ನಿಸ್ ದಾಖಲೆ ಮಾಡಿದರು. ಆದರೆ ಈ ಬಾರಿ 1 ಲಕ್ಷಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡುವ ಮೂಲಕ ತಮ್ಮದೇ ದಾಖಲೆ ಮುರಿಯಲು ಮುಂದಾಗಿದ್ದಾರೆ.
ಈ ದಿಸೆಯಲ್ಲಿ ಮುಂದಿನ ಭಾನುವಾರ (ಜೂ.17) ನಗರದಲ್ಲಿರುವ ರೇಸ್‍ಕೋರ್ಸ್ ಆವರಣದಲ್ಲಿ ಸಾವಿರಾರು ಮಂದಿ ಯೋಗಪಟುಗಳು ಸೇರಿ ಗಿನ್ನಿಸ್ ದಾಖಲೆಗಾಗಿ ಯಾವ ರೀತಿ ಯೋಗ ಪ್ರದರ್ಶನ ನೀಡಬೇಕೆಂಬುದರ ಬಗ್ಗೆ ತಾಲೀಮು ನಡೆಸಲಿದ್ದಾರೆ.

ಈ ಬಾರಿ ಶಾಲಾ -ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನಗರದಲ್ಲಿರುವ ಹಲವಾರು ಸಂಸ್ಥೆಗಳು , ಸಾರ್ವಜನಿಕರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನ ಒಂದೆಡೆ ಸೇರಿ ಯೋಗ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ದಾಖಲೆಗೆ ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವೆಬ್‍ಸೈಟನ್ನು ತೆರೆಯಲಾಗಿದ್ದು , ಸಾರ್ವಜನಿಕರು ಹಾಗೂ ಯೋಗಪಟುಗಳನ್ನು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಜಿಲ್ಲಾಡಳಿತ ತಿಳಿಸಿದೆ. ಸರಿ ಸುಮಾರು 200ಕ್ಕೂ ಹೆಚ್ಚು ಯೋಗ ಸಂಸ್ಥೆಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಹಲವಾರು ಮಂದಿ ಯೋಗ ಕಾರ್ಯಕ್ರಮದಲ್ಲಿ ಕೈ ಜೋಡಿಸಲಿದ್ದಾರೆ.

Facebook Comments

Sri Raghav

Admin