ದಸರಾ ಮೇಲೂ ಕೊರೋನಾ ಕಾರ್ಮೋಡ, ವಿಶ್ವವಿಖ್ಯಾತ ಜಂಬೂಸವಾರಿಗೂ ಬ್ರೇಕ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.20-ವಿಶ್ವವನ್ನೇಬೆಚ್ಚಿಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ವಕ್ರದೃಷ್ಟಿ ಬೀರಿದ್ದು, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈ ಬಾರಿ ಅವಕಾಶ ಇಲ್ಲದಂತಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ದಸರಾ ಹಬ್ಬಕ್ಕೆ ಇನ್ನು ಎರಡು ತಿಂಗಳ ಬಾಕಿ ಇದ್ದರೂ ಆಚರಣೆ ಕುರಿತಂತೆ ಸರ್ಕಾರ ಈವರೆಗೂ ಯಾವುದೇ ರೀತಿಯ ಸಿದ್ದತೆಗಳನ್ನಾಗಲಿ ಹಾಗೂ ಈ ಸಂಬಂಧ ಅಕಾರಿಗಳ ಸಭೆಯನ್ನಾಗಲಿ ನಡೆಸಿಲ್ಲ.

ಇನ್ನು ಈ ಬಾರಿ ಸರಳ ದಸರಾ ಆಚರಣೆ ಮಾಡಿದರೂ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯುವುದು ಅನುಮಾನ.

ಏಕೆಂದರೆ ಜಂಬೂ ಸವಾರಿಯನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಸರ್ಕಾರ ಅವಕಾಶ ನೀಡುವ ಸಾಧ್ಯತೆಗಳು ತೀರ ಕಡಿಮೆ ಎಂದು ತಿಳಿದುಬಂದಿದೆ.

ಬಹುತೇಕ ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಕೇಂದ್ರ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿರುವುದರಿಂದ ಯಾವುದೇ ಹಬ್ಬ ಹರಿದಿನಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವಂತಿಲ್ಲ.

ಮೂಲಗಳ ಪ್ರಕಾರ ಹಬ್ಬ ಆಚರಿಸಬೇಕೆ? ಬೇಡವೆ ಎಂಬ ಬಗ್ಗೆ ಸರ್ಕಾರದಲ್ಲಿ ಗೊಂದಲ ಮೂಡಿದೆ. ಹಬ್ಬವನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ.

ಹೀಗಾಗಿ ಅದ್ಧೂರಿಯಾಗಿ ಆಚರಿಸುವ ಬದಲು ಸರಳವಾಗಿಯಾದರೂ ಹಬ್ಬವನ್ನು ಆಚರಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

Facebook Comments

Sri Raghav

Admin