ಕನ್ನಡ ವಿಶಿಷ್ಟತೆಯ ಪೇಟೆಂಟ್ ಆಗಬೇಕು : ನಾಗಾಭರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಕನ್ನಡದ ನಮ್ಮತನವನ್ನು ಕಾಪಾಡಿಕೊಳ್ಳಲು ನಮ್ಮ ಪ್ರಾದೇಶಿಕ ವಿಶಿಷ್ಟತೆಗಳ ಪೇಟೆಂಟ್ ಪಡೆ ಯುವ ಕೆಲಸ ತುರ್ತಾಗಿ ಆಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು. ನಗರದ ಮಣಿಪಾಲ್ ಸೆಂಟರ್‍ನಲ್ಲಿರುವ ಮುಳಿಯ ಜ್ಯುವೆಲ್ಸï ಮಳಿಗೆಯಲ್ಲಿ ನಡೆದ `ಬೆಳೆಸೋಣ ನಮ್ಮತನ- ಕನ್ನಡದ ಭಾವ ಬದುಕು’ ಚಿಂತನ ಮಂಥನದಲ್ಲಿ ಅವರು ಮಾತನಾಡಿದರು.

ಗುಲಾಮಗಿರಿಯಲ್ಲಿ ಬೆಳೆದು ಬಂದ ಮನಸ್ಥಿತಿಯಿಂದಾಗಿ ಕನ್ನಡದ ಬಗ್ಗೆ ನಮ್ಮಲ್ಲೇ ಕೀಳರಿಮೆ ಇದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆಗಬೇಕಾದರೆ ಒಂದು ಆಂದೋಲನವೇ ಆಗಬೇಕು. ಅದಕ್ಕಾಗಿ ಪ್ರಾಧಿಕಾರವೂ ಬದ್ಧವಾಗಿದೆ. ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಕನ್ನಡ ಕಲಿಕೆ- ನಿರಂತರ ಕನ್ನಡ ಬಳಕೆ- ನಿರಂತರ ಕನ್ನಡ ಕಾಯಕ ಎಂಬ ಪರಿಕಲ್ಪನೆ ಯನ್ನು ನ.1ರಿಂದ ಅನುಷ್ಠಾನಕ್ಕೆ ತಂದಿದ್ದೇವೆ.

ಇದರ ಮೂಲಕ ಭಾಷಾ ಕಲಿಕೆಯ ಕೈಪಿಡಿಗಳನ್ನು ಅಂಗಡಿ, ಮಳಿಗೆಗಳಿಗೆ, ಟ್ಯಾಕ್ಸಿ ಚಾಲಕರಿಗೆ ವಿತರಿಸಲಾಗುವುದು. ಬರುವ ಗ್ರಾಹಕರು ಕನ್ನಡದಲ್ಲೇ ಸಂವಹನ ನಡೆಸಲು ಅಗತ್ಯವಿದ್ದಷ್ಟು ಅನುವಾದಿತ ವಾಕ್ಯಗಳು ಆ ಕೈಪಿಡಿಯಲ್ಲಿರುತ್ತವೆ. ಎಂದರು.

ಭಾಷೆ ಬೆಳೆಸಲು ಭಾವನಾತ್ಮಕ ಹೋರಾಟದ ಜೊತೆಗೆ ಕಾನೂನಿನ ಬೆಂಬಲವೂ ಬೇಕು. ನಾವು ಈ ನಿಟ್ಟಿನಲ್ಲಿ ಸ್ವಲ್ಪ ಹಿಂದೆ ಉಳಿದಿದ್ದೇವೆ. ರಾಷ್ಟ್ರಮಟ್ಟದಲ್ಲಿ ಜಾರಿಯಾಗುವ ಕಾನೂನುಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿ ಎಂದಾಗ ಹಿಂದಿ ಇಂಗ್ಲಿಷ್ ಎರಡು ಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಕೇಂದ್ರ ಸರ್ಕಾರ ಹೇಳಿತು. ಈ ವಾದವನ್ನು ಕೇಳಿದ ನ್ಯಾಯಾಲಯವೂ ಕೂಡಾ ಸುಮ್ಮನಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇಂಥ ಕಾರ್ಯಕ್ರಮವನ್ನು ಮುಳಿಯ ಪ್ರತಿಷ್ಠಾನ ಮಾಡುತ್ತಿರುವುದು ವಿಶೇಷ. ಈ ಬೀಜ ಕನ್ನಡ ಕಟ್ಟುವಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಹೇಳಿದರು. ಹಿರಿಯ ಪತ್ರಕರ್ತೆ, ಲೇಖಕಿ ಡಾ.ಆರ್ . ಪೂರ್ಣಿಮಾ ಮಾತನಾಡಿ, ಭಾಷೆ ಬಳಕೆಯ ಬದಲಾವಣೆ ತೀವ್ರಗತಿಯಲ್ಲಿ ಆಗಿದೆ. ಅನ್ನ- ರೈಸï, ಸಾಂಬಾರು-ರಸಂ, ಹುರುಳಿಕಾಯಿ – ಬೀನ್ಸï ಆಗಿಬಿಟ್ಟಿವೆ. ಅವುಗಳ ಮೂಲ ಶಬ್ದಗಳನ್ನು ಮರೆತೇಬಿಟ್ಟಿದ್ದೇವೆ.

ಕನ್ನಡ ವ್ಯಾಮೋಹದ ಭಾಷೆ ಆಗಬೇಕು. ಈ ಕೆಲಸ ಮನೆಗಳಿಂದಲೇ ಆರಂಭ ಆಗಬೇಕು. ಹೊಸ ತಲೆಮಾರಿಗೆ ಯಾವುದನ್ನು ನಮ್ಮ ಪ್ರೀತಿ ವ್ಯಾಮೋಹದ ಭಾಷೆಯನ್ನಾಗಿಸಬೇಕು ಎಂಬುದನ್ನು ಈಗಿಂದಲೇ ಕಲಿಸಬೇಕು. ಮನೆಯಲ್ಲಿ ಕನ್ನಡ ಬರಲಿ, ವಿಧಾನಸೌಧದಲ್ಲೂ ಬಳಕೆಯಾಗಲಿ. ಮುಂದೆ ಅದು ನ್ಯಾಯಾಲಯ, ಕಚೇರಿಗಳಿಗೂ ಆಡಳಿತದ ಭಾಷೆಯಾಗಿ ಪಸರಿಸುತ್ತದೆ. ಭಾಷೆಯ ವಿಷಯದಲ್ಲಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು; ಮುಂದಿನ ಕನ್ನಡಿಗರು ಎಂದರು.

ಹಿರಿಯ ರಂಗಕರ್ಮಿ, ಸಾಹಿತ್ಯ ವಿಮರ್ಶಕ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವಾಗ ಆಯಾ ರಾಜ್ಯಗಳು ಮಾತೃಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅದು ಕಡ್ಡಾಯವಾಗಿ ಜಾರಿ ಆಗಬೇಕು. ಇಂಗ್ಲಿಷ್ ವ್ಯಾಮೋಹದಿಂದಾಗಿ ನಾವು ಹಳೆಗನ್ನಡವನ್ನೇ ಹಂತಹಂತವಾಗಿ ಮರೆತುಬಿಟ್ಟೆವು.

ಇಂದು ನಮ್ಮ ಮಕ್ಕಳಿಗೆ ಶಬ್ದ ದಾರಿದ್ರ್ಯ ಮತ್ತು ಉಚ್ಚಾರ ದಾರಿದ್ರ್ಯ ಬಂದಿದೆ. ಒಂದು ಶಬ್ದಕ್ಕೆ ಇನ್ನೊಂದು ಶಬ್ದ ಪರ್ಯಾಯವಾಗಿ ಇದ್ದಾಗ ಭಾಷೆ ಶಕ್ತಿಶಾಲಿಯಾಗಿ ಬೆಳೆಯುತ್ತದೆ. ಈಗ ಕೊಡುವ ಶಿಕ್ಷಣ ನೋಡಿದರೆ ನಾವು ಮಕ್ಕಳನ್ನು ವಿದೇಶಕ್ಕೆ ಮಾರುತ್ತಿದ್ದೇವೆಯೇ? ಅಥವಾ ಅಲ್ಲಿಗಾಗಿಯೇ ತಯಾರಿಸುತ್ತಿದ್ದೇವೆಯೇ ಎಂಬ ಸಂದೇಹ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡದ ಪಾರಂಪರಿಕ ಆಭರಣ ಪ್ರದರ್ಶಿಸಿ ಮಾತನಾಡಿದ ಕೇಶವ ಪ್ರಸಾದ್ ಮುಳಿಯ, ಕನ್ನಡದ ಮೊದಲ ಗದ್ಯ ಕಾವ್ಯ, ಸೊಬಗಿನ ಬಳ್ಳಿ ಬರೆದವರು ನಮ್ಮ ಹಿರಿಯರಾದ ಮುಳಿಯ ತಿಮ್ಮಪ್ಪಯ್ಯ. ನಾವು ಆ ಸಾಹಿತ್ಯಿಕ ಪರಂಪರೆಯ ಹಿನ್ನೆಲೆಯೊಂದಿಗೆ ಆಭರಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ಭಾರತದಲ್ಲಿ ಪ್ರತಿಯೊಂದು ಕೆಲಸ ಅಥವಾ ವಿದ್ಯಮಾನಗಳು ಭಾವನಾತ್ಮಕ ನೆಲೆಗಟ್ಟಿನಲ್ಲೇ ನಡೆಯುತ್ತಿವೆ.

ಭಾವನೆ ವ್ಯಕ್ತಪಡಿಸುವಾಗ, ಬದುಕಿನ ಹಾವ ಭಾವ, ಉಡುಗೆ ತೊಡುಗೆಗಳಲ್ಲಿ ನಮ್ಮತನ (ಕನ್ನಡತನ) ವ್ಯಕ್ತವಾಗಬೇಕು. ಕನ್ನಡದ್ದೇ ಎಂಬುದನ್ನು ಗುರುತಿಸುವ ಸಮವಸ್ತ್ರ ಪರಿಕಲ್ಪನೆ ಜಾರಿಯಾಗಬೇಕು. ಅದು ಹೇಗೆ ಎಂಬುದನ್ನು ಪರಿಣತರು ಚಿಂತನೆ ನಡೆಸಿ ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮ ಸಂಯೋಜಕ ವೇಣು ಶರ್ಮಾ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ ಶ್ಯಾಮ್ ಎನ್. ಮತ್ತಿತರರಿದ್ದರು.

Facebook Comments