ಹೃದಯಾಘಾತದಿಂದ ಬಿಜೆಪಿ ಮುಖಂಡ ಎಂ.ನಾಗರಾಜ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18- ಬಿಬಿಎಂಪಿ ವಿರೋಧ ಪಕ್ಷದ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಎಂ.ನಾಗರಾಜು(66) ಅವರು ಇಂದು ನಸುಕಿನಲ್ಲಿ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ನಾಗರಾಜು ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು , ಬಂಧುಗಳನ್ನು ಅಗಲಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಎಂ.ನಾಗರಾಜ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಕುರುಬರಹಳ್ಳಿಯ ಸತ್ಯನಾರಾಯಣ ಲೇಔಟ್‍ನ ಅವರ ನಿವಾಸದಲ್ಲಿ ಮಧ್ಯಾಹ್ನದವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು. ತದನಂತರ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಗೆ ಮೃತರ ಪಾರ್ಥೀವ ಶರೀರವನ್ನು ಕೊಂಡೊಯ್ದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಮೂರು ಬಾರಿ ಬಿಬಿಎಂಪಿ ಸದಸ್ಯರು, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಾಗಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಎಂ.ನಾಗರಾಜ್ ಅವರು 2015ರ ಬಿಬಿಎಂಪಿ ಚುನಾವಣೆಯಲ್ಲಿ ನಂದಿನಿ ಲೇಔಟ್‍ನಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ ಪಕ್ಷದ ಕಾರ್ಯಕಾರಿಣಿ ಸದಸ್ಯರಾಗಿ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿ ಪಕ್ಷ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜಕೀಯದಲ್ಲಷ್ಟೇ ಅಲ್ಲದೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ನಾಗರಾಜ್ ಅವರು ಹಲವು ದೇವಾಲಯಗಳ ಜೀರ್ಣೋದ್ಧಾರ, ಪ್ರತಿಷ್ಠಿತ ಬಾಲಸುಬ್ರಹ್ಮಣ್ಯ ದೇವಾಲಯದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕುರುಬರಹಳ್ಳಿ ವೃತ್ತದಲ್ಲಿ ಹಂಪಿ ಮಾದರಿಯ ಕಲ್ಲಿನ ರಥದ ಮೇಲೆ ಡಾ.ರಾಜ್‍ಕುಮಾರ್ ಅವರ ಮಯೂರ ವರ್ಮ ಪಾತ್ರದ ಪ್ರತಿಮೆಯ ಪ್ರತಿಷ್ಠಾನದ ರೂವಾರಿಯೂ ಹೌದು. ಮೃತರ ಗೌರವಾರ್ಥ ಮಹಾಲಕ್ಷ್ಮಿ ಲೇಔಟ್‍ನ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಮಾಡಲಾಗಿದೆ.

ಸಂತಾಪ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜ್, ಕೇಶವಮೂರ್ತಿ, ಎಸ್.ಹರೀಶ್, ಮಾಜಿ ಮೇಯರ್‍ಗಳಾದ ರಾಮಚಂದ್ರಪ್ಪ, ಹುಚ್ಚಪ್ಪ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ, ಕಾಮಾಕ್ಷಿಪಾಳ್ಯದ ರಾಜಣ್ಣ, ಜಯರಾಂ, ಬಿಜೆಪಿ ಮುಖಂಡರಾದ ಆರ್.ವಿ.ಹರೀಶ್, ರಾಘವೇಂದ್ರಶೆಟ್ಟಿ, ರಾಜೇಂದ್ರ ಕುಮಾರ್, ಜಯರಾಜು, ಜಯಸಿಂಹ, ಶಿವಾನಂದ ಸೇರಿದಂತೆ ಕಾಂಗ್ರೆಸ್, ಚಾಲುಕ್ಯ ಟ್ರಸ್ಟ್ ಪದಾಧಿಕಾರಿಗಳು, ಅಭಿಮಾನಿಗಳು, ಸ್ನೇಹಿತರು, ಕಾರ್ಯಕರ್ತರು ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಪಕ್ಷಾತೀತವಾಗಿ ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.

Facebook Comments