151 ಕೋಟಿ ರೂ. ಹಗರಣ : ಟಿಡಿಪಿ ನಾಯಕ, ಮಾಜಿ ಸಚಿವ ಅಚ್ಚನ್‍ ನಾಯ್ಡು ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ, ಜೂ.12-ಕಾರ್ಮಿಕರ ರಾಜ್ಯ ವಿಮೆ ನಿಗಮ (ಇಎಸ್‍ಐ ಕಾಪೆರ್ರೇಷನ್)ದಲ್ಲಿ ನಡೆದಿದೆ ಎನ್ನಲಾದ 151 ಕೋಟಿ ರೂ.ಗಳ ಹಗರಣದ ಸಂಬಂಧ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಹಿರಿಯ ನಾಯಕ ಮತ್ತು ಆಂಧ್ರಪ್ರದೇಶ ಮಾಜಿ ಸಚಿವ ಕೆ.ಅಚ್ಚನ್‍ನಾಯ್ಟು ಅವರನ್ನು ಬಂಧಿಸಲಾಗಿದೆ. ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನಾಯ್ಡು ಅವರನ್ನು ಇಂದು ಮುಂಜಾನೆ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಟಿಡಿಪಿ ಸರ್ಕಾರದಲ್ಲಿ ನಾಯ್ಡು ಕಾರ್ಮಿಕ ಸಚಿವರಾಗಿದ್ದರು. ಆವರ ಅಧಿಕಾರಾವಧಿಯಲ್ಲಿ ಇಎಸ್‍ಐ ನಿಗಮದಲ್ಲಿ 151 ಕೋಟಿ ರೂ.ಗಳ ಅಕ್ರಮ ನಡೆದಿತ್ತು ಎಂದು ಎಸಿಬಿ ಆರೋಪಿಸಿದೆ.

ಇಎಸ್‍ಐಗೆ ಔಷಧಿಗಳು ಮತ್ತು ವೈದ್ಯಕೀಯ ಸಾಧನ-ಉಪಕರಣಗಳ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಬಗ್ಗೆ ದೂರುಗಳ ಆಥಾರದ ಮೇಲೆ ತನಿಖೆ ತೀವ್ರಗೊಳಿಸಿದ ಎಸಿಬಿ ಇಂದು ಮುಂಜಾನೆ ನಾಯ್ಡು ಅವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸಿಬಿ ಅಧಿಕಾರಿಗಳ ವಿಶೇಷ ತಂಡ ಶ್ರೀಕಾಕುಳಂ ಜಿಲ್ಲೆಯ ಟೆಕ್ಕಲಿಯಲ್ಲಿರುವ ನಾಯ್ಡು ಆವರ ನಿವಾಸಕ್ಕೆ ಇಂದು ಬೆಳಗ್ಗೆ ಹಠಾತ್ ಪ್ರವೇಶಿಸಿ ಟಿಡಿಪಿ ನಾಯಕ ಮತ್ತು ಮಾಜಿ ಸಚಿವರನ್ನು ವಶಕ್ಕೆ ತೆಗೆದುಕೊಂಡಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

Facebook Comments