ನೆಲಮಂಗಲ ನಗರಸಭೆ ಚುನಾವಣೆಯಲ್ಲಿ ಹೊಸ ಹೈಡ್ರಾಮಾ..!

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ನ.12- ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ನೆಲಮಂಗಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯೇ ಸಾಕ್ಷಿಯಾಗಿದೆ. ನೆಲಮಂಗಲ ನಗರಸಭೆ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಒಲಿಯುವಂತೆ ಮಾಡುವಲ್ಲಿ ತಂತ್ರ ರೂಪಿಸಿದ್ದ ಬಿಜೆಪಿ ಮಾಜಿ ಶಾಸಕ ಎಂ.ವಿ.ನಾಗರಾಜ್ ಅವರಿಗೆ ಸ್ವತಃ ಜೆಡಿಎಸ್ ಶಾಸಕರೇ ಅಡ್ಡಗಾಲಾಗಿದ್ದಾರೆ.

ಜೆಡಿಎಸ್ ಶಾಸಕರು ಸರ್ಕಾರಕ್ಕೆ ಪತ್ರ ಬರೆದು ಯಾವುದೇ ಕಾರಣಕ್ಕೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಸದೆ ವಾರ್ಡ್ ಪುನರ್ವಿಂಗಡಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೆಲಮಂಗಲ ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡುವ ಬದಲು ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಗೌಪ್ಯವಾಗಿ ಬರೆದಿದ್ದ ಪತ್ರ ಈ ಸಂಜೆಗೆ ಲಭ್ಯವಾಗಿದೆ.

ಇದರ ಬೆನ್ನಲ್ಲೇ ಇಂದು ನಡೆಯಬೇಕಿದ್ದ ನೆಲಮಂಗಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ನಗರಸಭೆಯ ಭವಿಷ್ಯ ಏನಾಗಬಹುದು ಎಂಬ ಕುತೂಹಲ ಕೆರಳಿಸಿದೆ. ಈ ನಡೆಯಿಂದಾಗಿ ನೆಲಮಂಗಲ ನಗರಸಭೆಗೆ ಜೆಡಿಎಸ್ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಶಾಸಕ ಎಂ.ವಿ.ನಾಗರಾಜ್ ಅವರಿಗೆ ಭಾರೀ ನಿರಾಸೆಯಾಗಿದೆ.

ಏನಿದು ಗೊಂದಲ: ನೆಲಮಂಗಲ ಪುರಸಭೆ ಹಾಗೂ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ನಗರಸಭೆಯನ್ನು ರಚಿಸಲಾಗಿತ್ತು. ರಾಜಕೀಯ ಮೇಲಾಟದಿಂದ ಪುರಸಭೆಯಿಂದ ಆಯ್ಕೆಯಾಗಿದ್ದ 23 ಮಂದಿಯನ್ನೇ ನಗರಸಭಾ ಸದಸ್ಯರನ್ನಾಗಿ ಸಿ ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವ ಕಸರತ್ತು ನಡೆಸಲಾಗಿತ್ತು.

ಆದರೆ, ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದ ನಾಲ್ಕು ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರು ಯಾವುದೇ ಕಾರಣಕ್ಕೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ವಾದ-ವಿವಾದ ಆಲಿಸಿದ ನ್ಯಾಯಾಲಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿರುವ ಬೆನ್ನಲ್ಲೇ ಜೆಡಿಎಸ್ ಶಾಸಕರು ಸ್ವತಃ ಸರ್ಕಾರಕ್ಕೆ ಪತ್ರ ಬರೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬದಲು ವಾರ್ಡ್ ಪುನರ್ವಿಂಗಡಣೆ ಪೂರ್ಣಗೊಂಡಿರುವ ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣೆ ನಡೆಸುವಂತೆ ಪತ್ರ ಬರೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.

Facebook Comments