ಸ್ವಾತಂತ್ರ ನಂತರ ದೇಶದ ಪ್ರಗತಿ ಕನಸು ಪ್ರಧಾನಿ ಮೋದಿಯಿಂದ ಸಾಕಾರ : ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26-ಸ್ವಾತಂತ್ರ್ಯಾನಂತರದ ಕನಸುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಡೇರಿಸುತ್ತಿರುವ ಜೊತೆಗೆ ಕಾನೂನು ಬಿಗಿಗೊಳಿಸುವ ಜೊತೆಗೆ ಸಂವಿಧಾನ ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್ ಇಂದಿಲ್ಲಿ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಭಾರತ ಅಮೆರಿಕ ಆಗಬೇಕು, ಸಿಂಗಪೂರ್ ಆಗಬೇಕು ಎಂದು ಕೆಲವರು ಬಯಸುತ್ತಿದ್ದರು.

ಆದರೆ ಈಗ ಅಮೆರಿಕ ಭಾರತವಾಗಬೇಕೆಂದು ಸ್ವತಃ ಅಲ್ಲಿನ ಅಧ್ಯಕ್ಷರೇ ಹೇಳಿರುವುದು ಭಾರತಕ್ಕೆ ಸಂದಿರುವ ಮಾನ್ಯತೆ ಎಂದು ಹೇಳಿದರು. ರಾಜ್ಯದಲ್ಲಿ ಅಭಿವೃದ್ಧಿಪರವಾದ ಆಡಳಿತವಿದ್ದು, ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸರ್ವ ಸಮಾನತೆಯಡಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಭಾರತ ಪ್ರಜಾಪ್ರಭುತ್ವ ದೇಶವಾಗಲು ಮಹಾತ್ಮಗಾಂಧೀಜಿ, ಬಿ.ಆರ್.ಅಂಬೇಡ್ಕರ್‍ರಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಪ್ರಜೆಗಳೇ ಆಡಳಿತ ನಡೆಸುವ ವಿಶಿಷ್ಟ ಪ್ರಜಾಪ್ರಭುತ್ವ ನಮ್ಮದು. ಪ್ರಜಾಪ್ರಭುತ್ವವೆಂದರೆ ಸ್ವೇಚ್ಛಾಚಾರವಲ್ಲ. ಕಾನೂನಿನಂತೆ ನಡೆದುಕೊಳ್ಳುವುದು ಈ ಉದ್ದೇಶಕ್ಕಾಗಿಯೇ ಸಂವಿಧಾನವನ್ನು ಜಾರಿಗೆ ತರಲಾಯಿತು ಎಂದು ಪ್ರತಿಪಾದಿಸಿದರು.

ಮುರಳೀಧರರಾವ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹುತಾತ್ಮರು ನಮಗೆ ಸ್ಫೂರ್ತಿಯಾಗಬೇಕು. ವಿಶ್ವಕ್ಕೆ ಇಂದು ಭಾರತದ ಪ್ರಜಾಪ್ರಭುತ್ವ ಮಾದರಿಯಾಗಿದೆ. 370ನೇ ವಿಧಿ ರದ್ದುಗೊಳಿಸಿರುವುದು, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಮೂಲಕ ಗಾಂಧೀಜಿಯವರ ಕನಸನ್ನು ಮೋದಿ ಸರ್ಕಾರ ನನಸಾಗಿಸಿದೆ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್‍ಕುಮಾರ್ ಕಟೀಲ್, ಅಧಿಕಾರ ಕಳೆದುಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪ್ರಚಾರಕ್ಕೋಸ್ಕರ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಅವರು ಈ ರೀತಿಯ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.

ಸಂಪುಟ ವಿಸ್ತರಣೆಯಂತಹ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ. ಆದರೆ ಈ ನಡುವೆ ಕಾಂಗ್ರೆಸ್ ಗೊಂದಲವನ್ನು ಸೃಷ್ಟಿಸಲು ಹೊರಟಿದೆ. ಕಾಂಗ್ರೆಸ್‍ಗೆ ನಾವಿಕನೇ ಇಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಮೂರು ತಿಂಗಳಾದರೂ ಅಧ್ಯಕ್ಷರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.

Facebook Comments