ಕಾಂಗ್ರೆಸ್‍ಗೆ ದೇಶದ ಸುರಕ್ಷತೆಯ ಕಾಳಜಿ ಇಲ್ಲ: ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಭಯೋತ್ಪಾದಕರ ವಿರುದ್ಧ ಸಂಸತ್ತಿನಲ್ಲಿ ಮಸೂದೆ ತಂದಾಗ, ಕಾಂಗ್ರೆಸ್ ಪಕ್ಷದ ಸಂಸದರು ಸದನದಿಂದ ಹೊರನಡೆದಿರುವುದು ದೇಶದ ಸುರಕ್ಷತೆ ಬಗ್ಗೆ ಆ ಪಕ್ಷಕ್ಕೆ ಇರುವ ನಿಷ್ಕಾಳಜಿಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹಿಂದೂಗಳ ವಿರುದ್ಧ ಮಸೂದೆಯನ್ನು ತರುತ್ತಿತ್ತು. ಆದರೆ, ಈಗ ದೇಶವಿರೋಧಿಗಳನ್ನು ಪತ್ತೆ ಹಚ್ಚಲು ಪೂರಕ ಮಸೂದೆ ತಂದಾಗ ಅದನ್ನು ಬೆಂಬಲಿಸದೆ ಸದನದ ಕಲಾಪ ಬಹಿಷ್ಕರಿಸಿರುವುದು ಭಯೋತ್ಪಾದಕರ ಪರವಾದ ನೀತಿಯನ್ನು ತೋರಿಸುವಂತಿದೆ ಎಂದರು.

ಮತದಾನದ ಸಮಯ ಬಂದಾಗ, ಕಾಂಗ್ರೆಸ್‍ನ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಸಂಸದರು ಮಸೂದೆ ಸರಿಯಿಲ್ಲ ಎಂದು ಹೇಳಿ ಸದನವನ್ನು ಬಹಿಷ್ಕರಿಸಿದ್ದಾರೆ. ಭಯೋತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಮತ್ತು ಜಿಹಾದಿ ಸಾಹಿತ್ಯದಿಂದ ಅವರನ್ನು ಭಯೋತ್ಪಾದಕರನ್ನಾಗಿ ಮಾಡಿದ ಜನರ ಬಗ್ಗೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‍ಗೆ ಸಹಾನುಭೂತಿ ಯಾಕೆ ಎಂದು ಅರ್ಥವಾಗುತ್ತಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಭಯೋತ್ಪಾದಕರಿಗೆ ಹಣ ನೀಡುವವರನ್ನು ಮತ್ತು ಜಿಹಾದಿ ಸಾಹಿತ್ಯವನ್ನು ಒದಗಿಸಿ ಕೊಡುವವರನ್ನು ಭಯೋತ್ಪಾದಕರೆಂದು ಪರಿಗಣಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಂಗೀಕರಿಸಿದೆ. ಇದಕ್ಕಾಗಿ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ಕಟೀಲ್ ಅವರು ಹೇಳಿದ್ದಾರೆ.

ಭಯೋತ್ಪಾದಕರ ದುಷ್ಕøತ್ಯವನ್ನು ಗುರುತಿಸಿ, ಶಿಕ್ಷಿಸಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಕಠಿಣ ಕಾನೂನುಗಳನ್ನು ತಂದಿರುವ ಬಿಜೆಪಿ ಸರಕಾರ ಮತ್ತು ಕೇಂದ್ರ ನಾಯಕರ ಕ್ರಮಕ್ಕೆ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Facebook Comments