ನಳೀನ್‍ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮರು ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.16- ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳೀನ್‍ಕುಮಾರ್ ಕಟೀಲ್ ಇಂದು ಮರು ಆಯ್ಕೆಯಾಗಿದ್ದಾರೆ.  ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನಳೀನ್‍ಕುಮಾರ್ ಕಟೀಲ್ ಅವರೇ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಪಕ್ಷದ ನಿಯಮದಂತೆ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಚುನಾವಣೆ ನಡೆಸಬೇಕು. ಇದರಿಂದ ಇಂದು ಚುನಾವಣೆ ಪ್ರಕ್ರಿಯೆ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು.
2022ರವರೆಗೆ ನಳೀನ್‍ಕುಮಾರ್ ಕಟೀಲ್ ಅಧ್ಯಕ್ಷರಾಗಿ ಮುಂದುವರೆಯುವರು. ಕಳೆದ ಜು.26ರಂದು ಅವರು ಅಧ್ಯಕ್ಷರಾಗಿ ನೇಮಕವಾಗಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ನಿಯಮದಂತೆ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ರಾಷ್ಟ್ರೀಯ ನಾಯಕರು ನೇಮಕ ಮಾಡಿದ್ದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಕಟೀಲ್ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆರ್‍ಎಸ್‍ಎಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು ಅಧ್ಯಕ್ಷರಾದ ನಂತರ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ.

ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಕೆಲವು ಪ್ರಮುಖ ನೇಮಕಾತಿಯಲ್ಲಿ ಪಕ್ಷದ ನಿಷ್ಠರಿಗೆ ಆದ್ಯತೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಟೀಲ್ ಪಕ್ಷದ ಸಂಘಟನೆ ಎಲ್ಲೆಲ್ಲಿ ಯಾವ ಯಾವ ಭಾಗಗಳಲ್ಲಿ ಹಿಂದಿದೆಯೋ ಅಂತಹ ಹೆಚ್ಚು ಕಡೆ ವಿಶೇಷ ಒತ್ತು ಕೊಡುತ್ತಿದ್ದಾರೆ.

Facebook Comments