ಬಿಜೆಪಿ ನೂತನ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗುರಿ ಏನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಆ.21- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವುದೇ ತಮ್ಮ ಮುಂದಿನ ಗುರಿ ಎಂದು ಬಿಜೆಪಿ ನೂತನ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷರಾಗಿ ತಮ್ಮ ತವರು ಜಿಲ್ಲೆಗೆ ಆಗಮಿಸಿದ ಅವರನ್ನು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಸಾಮಾನ್ಯ ಕಾರ್ಯಕರ್ತ.ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ನಾನು ಋಣಿ ಎಂದರು.

ಯಡಿಯೂರಪ್ಪನವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅದೇ ರೀತಿ ಜಗದೀಶ್ ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ ಹಾಗೂ ಪ್ರಹ್ಲಾದ್ ಜೋಷಿಯವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಬಲವರ್ಧನೆ ಮಾಡುವಂತಹ ಶಕ್ತಿ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಈ ವೇಳೆ ಹೇಳಿದರು.

ನಾನು ಸಂಘದ ಹಿನ್ನೆಲೆ ವೈಚಾರಿಕ ಸಿದ್ಧಾಂತದ ಆಧಾರದಲ್ಲಿ ಬಂದವನು. ಸಂಘ ನಮಗೆ ಕಲಿಸಿದ್ದು ಸಂಘಟನೆಯ ಕಾರ್ಯ ಮಾತ್ರ. ಕೆಲಸ ಮಾಡುತ್ತಿದ್ದೆ. ಆದರೆ ಯಾವುದೇ ನಿರೀಕ್ಷೆ ನನ್ನಲ್ಲಿರಲಿಲ್ಲ. ಪಕ್ಷವನ್ನು ವೈಭವ ಸ್ಥಿತಿಗೆ ಕೊಂಡೊಯ್ಯುವುದಷ್ಟೇ ನನ್ನ ನಿರೀಕ್ಷೆ.

ಅದರ ಮಧ್ಯೆ ಪಕ್ಷ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಕೊಡುತ್ತದೆ. ಆ ಜವಾಬ್ದಾರಿಯನ್ನು ನಿನ್ನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯ ಮತ್ತು ಕಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯ ಕಾರ್ಯವನ್ನು ಪಕ್ಷ ಬಲವರ್ಧನೆಗೆ ಮಾಡುತ್ತೇನೆಂಬ ವಿಶ್ವಾಸವಿದೆ ಎಂದರು.

ನಮ್ಮ ಪಕ್ಷದಲ್ಲಿ ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರನ್ನು ಗುರುತಿಸುತ್ತಾರೆ. ಮೊದಲಿನಿಂದಲೂ ನಾನು ಆರ್‍ಎಸ್‍ಎಸ್‍ನಲ್ಲಿದ್ದೆ. ವೈಚಾರಿಕ ಆಧಾರದ ಮೇಲೆ ನಾನು ಪಕ್ಷಕ್ಕೆ ಸೇರಿ ರಾಜಕೀಯ ಪ್ರವೇಶಿಸಿದೆ.

ಆಗಲೂ ಕೂಡ ಯಾವುದೇ ಅಪೇಕ್ಷೆ ಪಟ್ಟಿರಲಿಲ್ಲ. ಹಿರಿಯರು ಹೇಳಿದ್ದಕ್ಕೆ ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡೆ. ಈ ಬಾರಿ ಕೂಡ ನಾನು ಯಾವುದೇ ಅಪೇಕ್ಷೆ ಪಟ್ಟಿರಲಿಲ್ಲ, ಆದರೆ ಹಿರಿಯರೇ ಕರೆದು ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಇದೊಂದು ಸವಾಲಾಗಿದೆ. ಎಲ್ಲಾ ಹಿರಿಯ ನಾಯಕರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಪಕ್ಷವನ್ನು ಬಲಪಡಿಸುವ ಶಕ್ತಿ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ಬೆಳೆಸುವ ಪದ್ಧತಿ ಇದೆ. ಎಲ್ಲರೂ ಒಂದಾಗಿದ್ದು ಮಾರ್ಗದರ್ಶನ ಮಾಡುತ್ತಾರೆ. ಹೀಗಾಗಿ ಇಂದು ಕೊಟ್ಟಿರುವ ಜವಾಬ್ದಾರಿಗೆ ಎಲ್ಲಾ ಹಿರಿಯರು, ಕಿರಿಯರು ನಿಂತು ನನ್ನ ಬಳಿ ಈ ಕೆಲಸ ಮಾಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವು ತಂಡ ಮಾಡಿಕೊಂಡು ಕೆಲಸ ಮಾಡುತ್ತೇವೆ, ಯಾರೋ ಒಬ್ಬನೇ ಎಲ್ಲಾ ಕೆಲಸ ಮಾಡುವುದಿಲ್ಲ. ರಾಜಕೀಯದಲ್ಲಿ ಅಸಮಾಧಾನ ಸಾಮಾನ್ಯ. ಆದರೆ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಿಎಂ ಬಗ್ಗೆ ಮಾತನಾಡಿ, ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ಅವರಿಗೆ ಒಂದು ಗುರಿ ಹಾಗೂ ಯೋಚನೆ ಇದೆ. ಹಿಂದೆ ಅವರಿಗೆ ಅಧಿಕಾರ ಸಿಕ್ಕಾಗ ರಾಜ್ಯ ಹಿಂದೆಂದು ಕಂಡರಿಯದ ಅಭಿವೃದ್ಧಿ ತಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ಹಾಗೆ ಯಡಿಯೂರಪ್ಪ ಚಿಂತಿಸುತ್ತಾರೆ. ಹೀಗಾಗಿ ಖಂಡಿತ ಸಮಗ್ರ ಕರ್ನಾಟಕ ಕಲ್ಯಾಣ ಕರ್ನಾಟಕವಾಗುತ್ತದೆ. ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹಾಡಿ ಹೊಗಳಿದರು.

ಇನ್ನು ಕರಾವಳಿಗೆ ಮಹತ್ತರವಾದ ಯೋಜನೆಗಳು ಬರಬಹುದೇ ಎಂಬ ಪ್ರಶ್ನೆಗೆ ನಳಿನ್ ಕುಮಾರ್ ಪ್ರತಿಕ್ರಿಯಿಸಿ, ಈಗ ತಾನೇ ರಾಜ್ಯಾಧ್ಯಕ್ಷನಾಗಿದ್ದೇನೆ. ಯೋಚನೆ ಮಾಡುತ್ತೇವೆ. ಈಗ ನಮಗೆ ಪ್ರಮುಖವಾಗಿ ಸಂಘಟನೆಯ ಕಾರ್ಯಕ್ಕೆ ಈ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿಗೆ ಆಗಮಿಸಿದ್ದು, ಬಿಜೆಪಿ ಕಾರ್ಯಕರ್ತರು ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದರು.

ನಳಿನ್ ಕುಮಾರ್ ಕಟೀಲ್, ಬಿಜೆಪಿ ನೂತನ ರಾಜ್ಯಾಧ್ಯಕ್ಷ ಕೇರಳದಲ್ಲಿ ಕೋರ್ ಕಮಿಟಿ ಮೀಟಿಂಗ್‍ನಲ್ಲಿ ಭಾಗವಹಿಸಿದ್ದ ಅವರು ಇಂದು ಬೆಳಗ್ಗೆ 5.30ರ ಸುಮಾರಿಗೆ ಕಂಕನಾಡಿ ರೈಲ್ವೆ ಜಂಕ್ಷನ್‍ನಲ್ಲಿ ಆಗಮಿಸಿದ ಸಂದರ್ಭ ನೂರಾರು ಬಿಜೆಪಿ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು ಸ್ವಾಗತ ಕೋರಿದರು.

Facebook Comments

Sri Raghav

Admin