‘ತಿಹಾರ್ ಜೈಲಿನಲ್ಲಿ ಚಿದಂಬರಂ, ರಾಜಾ, ಡಿಕೆಶಿ ಎಂದು ಹಾಜರಾತಿ ಕೂಗುತ್ತಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ನೂರೈವತ್ತು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‍ನಲ್ಲಿ ಅಧ್ಯಕ್ಷರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಅವರದ್ದೇನಿದ್ದರೂ ಕೇವಲ ಕುಟುಂಬ ರಾಜಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎನ್.ಆರ್.ರಮೇಶ್ ಪದಗ್ರಹಣ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಪ್ರತಿ ಮೂರು ವರ್ಷಕ್ಕೆ ಅಧ್ಯಕ್ಷರ ಬದಲಾವಣೆಯಾಗುತ್ತದೆ.

ಆದರೆ, 2014ರಲ್ಲಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರು ಈಗಲೂ ಮುಂದುವರಿದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟು ಬಹಳ ದಿನಗಳಾಗುತ್ತ ಬಂದರೂ ಹೊಸಬರನ್ನು ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತಾಗಿದೆ ಎಂದು ಕುಟುಕಿದರು. ಇತ್ತೀಚೆಗೆ ಮೂರು ಜನ ಮುಖ್ಯಮಂತ್ರಿಗಳನ್ನು ರಾಜ್ಯದಲ್ಲಿ ನೋಡಿದ್ದೇವೆ. ಒಬ್ಬರು ಮನೆ ಮನೆಯಲ್ಲೂ ಕಣ್ಣೀರು ಹಾಕಿಸಿದ ಮುಖ್ಯಮಂತ್ರಿ.

ಮತ್ತೊಬ್ಬರು ಪ್ರತಿ ಮನೆ ಮನೆಯಲ್ಲೂ ಕಣ್ಣೀರು ಹಾಕಿ ಬರುವ ಮುಖ್ಯಮಂತ್ರಿಯಾದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದ ಕಟೀಲ್, ಮತ್ತೊಬ್ಬರು ಎಲ್ಲರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಇದ್ದಾರೆ. ಈ ಕಣ್ಣೀರು ಒರೆಸುವ ಮುಖ್ಯಮಂತ್ರಿಯೇ ನಮ್ಮ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಎಂದು ಕೊಂಡಾಡಿದರು.

ಪಾಕಿಸ್ತಾನ ಪರ ಘೋಷಣೆ ಮಾಡಿದ ವಿದ್ಯಾರ್ಥಿನಿ ಪರ ಮಾತನಾಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾಗ ಭಾರತದ ಇತಿಹಾಸ ಓದಿದ್ದರೋ ಅಥವಾ ಪಾಕಿಸ್ತಾನದ ಇತಿಹಾಸ ಓದಿದ್ದರೋ ಎಂದು ನಳಿನ್‍ಕುಮಾರ್ ಕಟೀಲ್ ಡಿಕೆಶಿಗೆ ತಿರುಗೇಟು ನೀಡಿದರು.  ಒಂದು ಕಾಲದಲ್ಲಿ ತಿಹಾರ್ ಜೈಲಿನಲ್ಲಿ ಕಸಬ್, ಅಫ್ಜಲ್ ಗುರು, ಚೋಟಾ ಶಕೀಲ್ ಎಂದು ಹಾಜರಾತಿ ಕೂಗುತ್ತಿದ್ದರು.

ಆದರೆ, ಇಂದು ಅದೇ ಜೈಲಿನಲ್ಲಿ ಚಿದಂಬರಂ, ರಾಜಾ, ಡಿ.ಕೆ.ಶಿವಕುಮಾರ್ ಎಂದು ಹಾಜರಾತಿ ಕೂಗುತ್ತಿದ್ದಾರೆ. 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‍ಗೆ ದೆಹಲಿ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಜನ ಕಾಂಗ್ರೆಸ್‍ಅನ್ನು ತಿರಸ್ಕರಿಸಿ ಬಿಜೆಪಿಯನ್ನು ಪುರಸ್ಕರಿಸಿದ್ದಾರೆ ಎಂದು ಹೇಳಿದರು.  ಸಚಿವ ಆರ್.ಅಶೋಕ್ ಮಾತನಾಡಿ, ಬೆಂಗಳೂರಿನಲ್ಲಿ ಬಿಜೆಪಿ ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ನಗರ ನಮ್ಮ ಪಕ್ಷದ ಭದ್ರಕೋಟೆಯಾಗಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಜೆಪಿ ಬೆಳವಣಿಗೆಗೆ ಪ್ರಮುಖ ಕಾರಣಕರ್ತರು ಅನಂತಕುಮಾರ್ ಹಾಗೂ ವಿಜಯಕುಮಾರ್. ಅವರಿಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು. ನಗರದ ಬಿಜೆಪಿ ಕಾರ್ಯಕರ್ತರು ಚಿನ್ನದಂತಹವರು. ಕಷ್ಟ-ಸುಖ ಎರಡಲ್ಲೂ ಪಕ್ಷದ ಕೈ ಹಿಡಿದಿದ್ದಾರೆ. ಬೆಂಗಳೂರನ್ನು ಬಿಜೆಪಿಯ ಭದ್ರಕೋಟೆ ಮಾಡಿರುವುದು ನಮ್ಮ ಕಾರ್ಯಕರ್ತರ ಸಾಧನೆ ಎಂದರು.

ಕಳೆದ ಬಾರಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ಎರಡು ಜಿಲ್ಲಾಧ್ಯಕ್ಷರಿದ್ದರು. ಈ ಬಾರಿ ಅದನ್ನು ಮೂರು ಭಾಗ ಮಾಡಿ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಎಂದು ವಿಭಜಿಸಲಾಗಿದೆ. ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಎಲ್ಲ ಒಟ್ಟಿಗೆ ಕೆಲಸ ಮಾಡಬೇಕು. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಭಾರೀ ಬಹುಮತ ಗಳಿಸಿ ಮತ್ತೆ ಅಧಿಕಾರ ಹಿಡಿಯಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಅಶೋಕ್ ಕರೆ ನೀಡಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬಿಜೆಪಿಯಲ್ಲಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಅಧ್ಯಕ್ಷ ಸ್ಥಾನ ಕೊಡುವ ಪ್ರಕ್ರಿಯೆ ನೈಸರ್ಗಿಕವಾಗಿ ಆಗುತ್ತದೆ. ಸಿದ್ಧಾಂತದ ಆಧಾರದ ಮೇಲೆ ಲಕ್ಷಾಂತರ, ಕೋಟ್ಯಂತರ ಕಾರ್ಯಕರ್ತರನ್ನು ಒಂದೆಡೆ ಸೇರಿಸಿರುವ ಪ್ರಪಂಚದ ಏಕೈಕ ರಾಜಕೀಯ ಪಕ್ಷ ಬಿಜೆಪಿ ಮಾತ್ರ ಎಂದು ಹೇಳಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಎನ್.ಆರ್.ರಮೇಶ್, ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಯನ್ನು ನಂಬರ್ ಒನ್ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಏಪ್ರಿಲ್‍ನಲ್ಲಿ ಬರುವ ತಾಲೂಕು ಪಂಚಾಯ್ತಿ ಚುನಾವಣೆ, ಸೆಪ್ಟೆಂಬರ್‍ನಲ್ಲಿ ಬರುವ ಬಿಬಿಎಂಪಿ ಚುನಾವಣೆ ಹಾಗೂ ನಂತರ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸುವಂತೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಕೈಕೊಟ್ಟ ಕರೆಂಟ್: ಪದಗ್ರಹಣ ಸಮಾರಂಭದಲ್ಲಿ ಮಾಜಿ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದಾಗ ವಿದ್ಯುತ್ ಕೈಕೊಟ್ಟಿದ್ದರಿಂದ ಜನರೇಟರ್ ವ್ಯವಸ್ಥೆ ಇಲ್ಲದೆ, ಕರೆಂಟ್ ಬಂದ ಮೇಲೆ ಅವರು ಭಾಷಣ ಮಾಡಬೇಕಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಪಿ.ಸಿ.ಮೋಹನ್, ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಸೇರಿದಂತೆ ಬಹುತೇಕ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

Facebook Comments