ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರವೇ ಫೈನಲ್ : ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ,ಡಿ.17- ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಸಂಪುಟ ವಿಸ್ತರಣೆಗೆ ಬಿಜೆಪಿಯಲ್ಲಿ ಭಾರೀ ಲಾಬಿ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯಾಧ್ಯಕ್ಷರು ಸಿಎಂ ಬಿಎಸ್‍ವೈ ಪರ ಮಾತನಾಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ವಿಸ್ತರಣೆಯಲ್ಲಿ ನಾನಾಗಲಿ ಮತ್ತು ಪಕ್ಷದ ಯಾವುದೇ ನಾಯಕರುಮಧ್ಯಪ್ರವೇಶ ಮಾಡುವುದಿಲ್ಲ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸ್ಪಷ್ಟಪಡಿಸಿದರು.  ಮುಖ್ಯಮಂತ್ರಿಯವರು ಯಾವ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನೂ ಕೈಬಿಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಇದರಲ್ಲಿ ಪಕ್ಷದ ಪಾತ್ರ ಏನೂ ಇರುವುದಿಲ್ಲ ಎಂದು ಪುನರುಚ್ಚರಿಸಿದರು.

ರಾಜ್ಯದ ಜನತೆ ಬಿಜೆಪಿಗೆ ಜನಾದೇಶ ನೀಡಿದ್ದಾರೆ. ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಚುನಾವಣೆಗೂ ಮುನ್ನ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಿ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸುವುದಾಗಿ ಹೇಳಿದರು.

ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನಮಾನ ಕುರಿತು ಬೇಕು, ಬೇಡ ಎಂಬುದನ್ನು ಕೂಡ ಮುಖ್ಯಮಂತ್ರಿ ಹಾಗೂ ಕೇಂದ್ರದ ವರಿಷ್ಠರು ತೀರ್ಮಾನಿಸುತ್ತಾರೆ. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವರು. ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗೆ ಅಗತ್ಯಬಿದ್ದರೆ ಯಾರಿಗಾದರೂ ಡಿಸಿಎಂ ಸ್ಥಾನ ನೀಡಬಹುದು. ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವುದು ತಪ್ಪಲ್ಲ. ಪ್ರತಿಯೊಬ್ಬರಿಗೂ ಮಂತ್ರಿಯಾಗಬೇಕೆಂಬ ಆಸೆ ಇರುತ್ತದೆ. ಆದರೆ ಯಾರಿಗೆ ಯಾವ ಸಂದರ್ಭದಲ್ಲಿ ಸ್ಥಾನ ನೀಡಬೇಕೋ ಅದನ್ನು ಯಡಿಯೂರಪ್ಪನವರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು.

Facebook Comments