ನಾಮ್ ಶೃಂಗಸಭೆಗೆ 2ನೇ ಬಾರಿ ಪ್ರಧಾನಿ ಮೋದಿ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.23 (ಪಿಟಿಐ)- ಅಜರ್‍ಬಯಜನ್‍ನ ಬಾಕು ನಗರಿಯಲ್ಲಿ ಇದೇ ತಿಂಗಳ 25 ಮತ್ತು 26ರಂದು ನಡೆಯಲಿರುವ 18ನೇ ಅಲಿಪ್ತ ಚಳುವಳಿ ಶೃಂಗಸಭೆ (ನಾಲ್ ಅಲೈನ್ಡ್ ಮೂವ್‍ಮೆಂಟ್-ನಾಮ್ ಸಮಿಟ್)ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಾಗುತ್ತಿಲ್ಲ. ಬದಲಿಗೆ ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯ ನಾಯ್ಡು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಾಮ್ ಶೃಂಗಸಭೆಗೆ ಪ್ರಧಾನಿ ಅನುಪಸ್ಥಿತರಾಗುತ್ತಿರುವುದು ಇದು ಎರಡನೆ ಬಾರಿ. ವೆನಿಜುವೆಲಾದಲ್ಲಿ 2016ರಲ್ಲಿ ನಡೆದ 17ನೇ ಶೃಂಗಸಭೆಗೂ ಮೋದಿ ಗೈರಾಗಿದ್ದರು. ಆಗ ಆಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾರತವನ್ನು ಪ್ರತಿನಿಧಿಸಿದ್ದರು. ಭಾರತವನ್ನು ಬಹು ಹೊಂದಾಣಿಕೆಯ ದೇಶವನ್ನಾಗಿ ಪರಿವರ್ತಿಸುವ ತಮ್ಮ ಧೋರಣೆಯನ್ನು ಮತ್ತೊಮ್ಮೆ ತಿಳಿಸುವ ಉದ್ದೇಶದಿಂದ ಅವರು ನಾಮ್ ಶೃಂಗಸಭೆಗೆ ಹಾಜರಾಗುತ್ತಿಲ್ಲ ಎನ್ನಲಾಗಿದೆ.

ಈ ಮೂಲಕ ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತಮ್ಮ ಗೈರು ಹಾಜರಿ ಮೂಲಕ ಪ್ರತಿಪಾದಿಸುವುದು ಮೋದಿ ಅವರ ಉದ್ದೇಶ.  ಅಭಿವೃದ್ಧಿ ಹೊಂದುತ್ತಿರುವ 120 ದೇಶಗಳ ವೇದಿಕೆಯೇ ನಾಮ್. ಈ ದೇಶಗಳು ಪರಸ್ಪರ ಸದೃಢವಾಗಿ ಹೊಂದಾಣಿಕೆಯಾಗಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದ ನಂತರ ಇದು ವಿಶ್ವದ ವಿವಿಧ ದೇಶಗಳ ಬೃಹತ್ ಸಮೂಹ ವೇದಿಕೆಯಾಗಿದೆ.

ಎರಡು ದಿನಗಳ ನಾಮ್ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಉಪ ರಾಷ್ಟ್ರಪತಿ ನಾಯ್ಡು ಅವರು ಇರಾನ್ ಅಧ್ಯಕ್ಷ ಹಸನ್ ರೌಹನಿ ಸೇರಿದಂತೆ ವಿವಿಧ ದೇಶಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಮಂತ್ರಿಗಳು, ಮತ್ತು ಮುಖಂಡರನ್ನು ಭೇಟಿ ಮಾಡಲಿದ್ದು, ಭಯೋತ್ಪಾದನೆ ಸೇರಿದಂತೆ ವಿಶ್ವದ ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.

Facebook Comments