ನಮ್ಮ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷದ ಸಂಭ್ರಮ…2011ರ ಅಕ್ಟೋಬರ್ 20ರಂದು ನಗರದಲ್ಲಿ ಮೊದಲ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಆರಂಭದಲ್ಲಿ ಬಯ್ಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗಿನ 6 ಕಿ.ಮೀ. ಉದ್ದದ ಮೆಟ್ರೋ ರೈಲು ಸೇವೆ ಪ್ರಾರಂಭವಾಯಿತು.

ಬಯ್ಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗಿನ ನೇರಳೆ ಮೆಟ್ರೋ ರೈಲು ಮಾರ್ಗ ಆರು ನಿಲ್ದಾಣಗಳನ್ನು ಒಳಗೊಂಡಿದ್ದು, ಆರಂಭದಲ್ಲಿ ಪ್ರತಿನಿತ್ಯ 20 ಸಾವಿರ ಮಂದಿ ಪ್ರಯಾಣಿಕರು ಮೆಟ್ರೋ ರೈಲು ಬಳಕೆ ಮಾಡುತ್ತಿದ್ದರು. ಇದೀಗ ಮೆಟ್ರೋ ರೈಲು ಸೇವೆಗೆ ಬರೋಬ್ಬರಿ 10 ವರ್ಷಗಳು ಪೂರ್ಣಗೊಂಡಿದ್ದು, ಹಲವಾರು ಮೆಟ್ರೋ ಮಾರ್ಗಗಳು ವಿಸ್ತಾರಗೊಂಡಿ ರುವುದರಿಂದ ಇಂದು ಪ್ರತಿನಿತ್ಯ ಸರಿಸುಮಾರು 5.30 ಲಕ್ಷ ಪ್ರಯಾಣಿಕರು ಮೆಟ್ರೋ ರೈಲನ್ನು ಅವಲಂಬಿಸಿದ್ದಾರೆ.

ಇತ್ತೀಚೆಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ 2.12 ಲಕ್ಷಕ್ಕೆ ಕುಸಿದಿತ್ತು. ಮಾರ್ಚ್ 2014 ರಿಂದ ಪೀಣ್ಯ ಕೈಗಾರಿಕಾ ಪ್ರದೇಶದಿಂದ ಮಂತ್ರಿಮಾಲ್‍ವರೆಗಿನ ಮೆಟ್ರೋ ರೈಲು ಸಂಚಾರ ಆರಂಭವಾದರೆ, 2015ರಲ್ಲಿ ಪೀಣ್ಯದಿಂದ ನಾಗವಾರದವರೆಗಿನ ಮೆಟ್ರೋ ಹಳಿ ಕಾರ್ಯಾರಂಭ ಮಾಡಿತು.

2015ರ ನವೆಂಬರ್‍ನಲ್ಲಿ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ ಮೆಟ್ರೋ ರೈಲು ಸಂಚಾರ ಆರಂಭವಾದರೆ, 2017ರ ಜೂನ್‍ನಲ್ಲಿ ಮಂತ್ರಿಮಾಲ್‍ನಿಂದ ಯಲಚೇನಹಳ್ಳಿವರೆಗಿನ ಸೇವೆ ಆರಂಭವಾಯಿತು. ಇದರ ಜತೆಗೆ ಬಯ್ಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ರೈಲು ಸೇವೆ ಆರಂಭವಾಗುವುದರ ಜತೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿತು.

ಎರಡನೆ ಹಂತದ ಕಾಮಗಾರಿ ಸಾಗುತ್ತಿದ್ದು, 2024ರ ವೇಳೆಗೆ ಎರಡನೆ ಹಂತದ ಮೆಟ್ರೋ ರೈಲು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೆಟ್ರೋ ನಿಗಮದ ಅಕಾರಿಗಳು ತಿಳಿಸಿದ್ದಾರೆ.

ಕುಂಟುತ್ತಾ ಸಾಗುತ್ತಿದೆ ಕಾಮಗಾರಿ: ಮೆಟ್ರೋ ರೈಲು ಸೇವೆ ಆರಂಭವಾಗಿ 10 ವರ್ಷ ಕಳೆದರೂ ಒಂದು ದಶಕದಲ್ಲಿ ನಗರದಲ್ಲಿ ಕೇವಲ 56ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚರಿ ಸುತ್ತಿರುವುದಕ್ಕೆ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯೇ ಕಾರಣ ಎನ್ನಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಭೂ ಸ್ವಾೀನ ಪ್ರಕ್ರಿಯೆಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ವರ್ಷಕ್ಕೆ ಸರಾಸರಿ 5.6ಕಿ.ಮೀ. ಉದ್ದದ ರೈಲು ಸಂಚಾರಕ್ಕೆ ಮಾತ್ರ ಅವಕಾಶ ಸಿಕ್ಕಂತಾಗಿದೆ.

2002ರಲ್ಲಿ ದೆಹಲಿಯಲ್ಲಿ ಆರಂಭವಾದ ಮೆಟ್ರೋ ಸಂಪರ್ಕ 349ಕಿ.ಮೀ. ಸುತ್ತಳತೆ ಯಲ್ಲಿ ಪ್ರಯಾಣ ಮಾಡುತ್ತಿದೆ. ಅದೇ ರೀತಿ 2017ರಲ್ಲಿ ಆರಂಭವಾದ ಹೈದರಾಬಾದ್ ಮೆಟ್ರೋ ಜಾಲ 67ಕಿ.ಮೀ. ಇದ್ದರೆ, 2015ರಲ್ಲಿ ಶುರುವಾದ ಚೆನ್ನೈ ಮೆಟ್ರೋ ಜಾಲ 54ಕಿ.ಮೀ. ವಿಸ್ತಾರಗೊಂಡಿದೆ.

Facebook Comments