ಗಂಗಾರತಿ ಮಾದರಿಯಲ್ಲಿ ಇದೇ ಪ್ರಪ್ರಥಮ ಬಾರಿಗೆ ನಂಜನಗೂಡಿನಲ್ಲಿ ಕಪಿಲಾರತಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಡಿ.10- ಉತ್ತರ ಭಾರತದ ಗಂಗಾನದಿ ತಟದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ನಂಜನಗೂಡಿನಲ್ಲಿ ಕಪಿಲಾರತಿಯನ್ನು ಇದೇ ಪ್ರಪ್ರಥಮ ಬಾರಿಗೆ ನೇರವೇರಿಸಲಾಯಿತು. ಮೈಸೂರು ಸಮೀಪದ ನಂಜನಗೂಡಿನಲ್ಲಿ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ನಿನ್ನೆ ಸಂಜೆ ನಡೆದ ಕಪಿಲಾರತಿಯನ್ನು ಸಾವಿರಾರು ಮಂದಿ ಭಕ್ತರು ವೀಕ್ಷಿಸಿದರು. ನಮ್ಮ ನದಿ – ನಮ್ಮ ಶ್ರದ್ಧೆ ಘೋಷಣೆಯೊಂದಿಗೆ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

800 ಮೀಟರ್ ಉದ್ದದ ಕಪಿಲಾನದಿ ಸ್ನಾನ ಘಟ್ಟದ ಮೆಟ್ಟಿಲುಗಳಲ್ಲಿ ಜೋಡಿಸಿಟ್ಟಿದ್ದ ಸಾಲು ಸಾಲು ದೀಪಗಳನ್ನು ಬೆಳಗಿಸುವ ಮೂಲಕ ಕಪಿಲಾ ಮಾತೆಗೆ ಪೂಜೆ ಸಲ್ಲಿಸಲಾಯಿತು.
ಪಾರಂಪರಿಕ 16 ಕಾಲು ಮಂಟಪ , ನೂತನ ಸೇತುವೆ, ನದಿಯ ದಂಡೆ, ಹಾಗೂ ಸ್ನಾನ ಘಟ್ಟದ ಸುತ್ತಲೂ ದೀಪಗಳು ಬೆಳಗುತ್ತಿದ್ದದ್ದು, ಅತ್ಯಾಕರ್ಷಕವಾಗಿ ಕಂಡುಬಂತು.

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್, ಪುರೋಹಿತ ಕೃಷ್ಣಾ ಜೋಯೀಸ್, ನೇತೃತ್ವದಲ್ಲಿ ಸಂಜೆ ಕಪಿಲಾರತಿ ನೇರವೇರಿತು.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಶ್ರೀಗಳು, ಹೀರೆಹಡಗಲಿಯ ಶ್ರೀ ಅಭಿನವ ಹಾಲಸ್ವಾಮಿ , ರಾಮಕೃಷ್ಣ ಆಶ್ರಮದ ಶ್ರೀ ಯುಕ್ತೇಶಾನಂದಜೀ ಮಹಾರಾಜ್ ಸೇರಿದಂತೆ ಹಲವು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಎಲೆಗಳಿಂದ ಮಾಡಿದ ತಟ್ಟೆಯಲ್ಲಿ ದೀಪಗಳನ್ನಿಟ್ಟು ಬೆಳಗಿಸಿದ್ದು ಮನಮೋಹಕವಾಗಿತ್ತು.

 

 

Facebook Comments