“ಡಿಕೆಶಿ ಎಲ್ಲಿದ್ರೂ ಹುಲಿನೇ, ಅವರು 2ನೇ ಸಿದ್ದಾರ್ಥ್ ಆಗಬಾರದು” : ನಂಜಾವಧೂತಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11-ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಯಾರಾದರೂ ಮಾಡಿದರೆ ಮಠಾಧೀಶರು ಪ್ರತಿಭಟನೆಗೆ ಕರೆಕೊಡಬೇಕಾಗುತ್ತದೆ. ಆಗ ಬೆಂಗಳೂರಿನಲ್ಲಿ ಜಾಗವೇ ಇರುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಪಕ್ಷಾತೀತವಾಗಿ ಡಿಕೆಶಿ ಅವರಿಗೆ ಬೆಂಬಲ ವ್ಯಕ್ತಪಡಿಸಲು ಮಾಡುತ್ತಿರುವ ಚಿಕ್ಕ ಹೋರಾಟ ಎಂದು ಹೇಳಿದರು. ಇಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಗರದ ನ್ಯಾಷನಲ್ ಕಾಲೇಜಿನಿಂದ ಫ್ರೀಡಂಪಾರ್ಕ್‍ವರೆಗೆ ಪಾದಯಾತ್ರೆ ಬಂದು ವಿಶ್ವ ಒಕ್ಕಲಿಗರ ಮಹಾವೇದಿಕೆ, ಒಕ್ಕಲಿಗರ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಡಿ.ಕೆ.ಶಿ ಅಭಿಮಾನಿಗಳ ಸಂಘ ಹಾಗೂ ಕಾಂಗ್ರೆಸ್ ನಾಯಕರು ನಡೆಸಿದ ಸಮಾವೇಶದಲ್ಲಿ ಮಾತನಾಡಿದರು.

ಒಂದು ಹಿಡಿ ಬಿತ್ತಿ ಕಂಡಗ ಬೆಳೆಯುವ ಜನ ಒಕ್ಕಲಿಗರು. ಅವರು ಬೀದಿಗಿಳಿದರೆ ಏನಾಗುತ್ತದೆ ಎಂಬುದನ್ನು ಇಂದು ಎಲ್ಲರೂ ನೋಡುತ್ತಿದ್ದಾರೆ. ರಾಜ್ಯದ ಜನರಿಗೆ ಮಿಡಿಯುತ್ತಿದ್ದ ಹೃದಯ ದೇವೇಗೌಡರದ್ದು. ಕಾವೇರಿ ಇರಲಿ, ಕೃಷ್ಣೆ ಇರಲಿ ಉತ್ತರ ಕರ್ನಾಟಕ ಜನರ ಸಮಸ್ಯೆಗಳಿರಲಿ, ಲೋಕಸಭೆಯಲ್ಲಿ ಈ ಎಲ್ಲದರ ಬಗ್ಗೆ ದನಿಯೆತ್ತುತ್ತಿದ್ದವರು ಅವರು. ಆದರೆ ಅವರನ್ನು ಲೋಕಸಭೆಗೆ ಕಳುಹಿಸಲು ಆಗಲಿಲ್ಲ.

ನಾಡಿನ ಬಹಳ ದೊಡ್ಡ ದನಿ ಹೋದಂತಾಗಿದೆ ಎಂದರು. ಲಕ್ಷಾಂತರ ಜನರಿಗೆ ಅನ್ನ ನೀಡುತ್ತಿದ್ದ ವ್ಯಕ್ತಿ ಕಾಫಿಡೇ ಸಿದ್ಧಾರ್ಥ್. ಏನೂ ತಪ್ಪು ಮಾಡದೆ ಈ ಲೋಕ ತ್ಯಜಿಸುವ ಹಾಗಾಯಿತು. ಕಾರ್ಯಾಂಗ, ಶಾಸಕಾಂಗ ಕೈ ಬಿಟ್ಟರೂ ನ್ಯಾಯಾಂಗ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರನ್ನು 2 ನೇ ಸಿದ್ದಾರ್ಥ್ ಆಗಬಾರದು ಎಂದರು.

ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆ ಮಾಡಿ ತರುತ್ತೇವೆ ಎಂಬ ಹುಂಬತನ ನಮಗಿಲ್ಲ. ಡಿಕೆಶಿ ಅಪರಾಧಿ ಎಂಥಾದರೆ ಅದಕ್ಕೆ ಕಾನೂನಿದೆ. ಆದರೆ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಶಿಕ್ಷೆಗೆ ಒಳಗಾದವರಿಗೂ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶವಿರುತ್ತದೆ. ಆದರೆ ತನ್ನ ತಂದೆಗೆ ಎಡೆಯಿಟ್ಟು ಬರುತ್ತೇನೆ ಎಂದ ಡಿಕೆಶಿಗೆ ಅವಕಾಶ ನೀಡದ್ದನ್ನು ಕೇಳಿದಾಗ, ನನಗೆ ಪುಣ್ಯಕೋಟಿಯ ನೆನಪಾಯಿತು ಎಂದು ನುಡಿದರು.

ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ. ಸಮುದಾಯ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಚೆನ್ನೈನಲ್ಲಿ ಕನ್ನಡದ ಹೋರಾಟಗಾರರನ್ನು ಅರೆಸ್ಟ್ ಮಾಡಿದಾಗ ಎಲ್ಲರಿಗೂ ಶ್ಯೂರಿಟಿ ಕೊಟ್ಟು ಬೇಲ್ ಕೊಡಿಸಿದವರು ಡಿ.ಕೆ.ಶಿವಕುಮಾರ್. ಹುಲಿ ಯಾವತ್ತಿದ್ದರೂ ಹುಲಿಯೇ. ಬೋನಿಗೆ ಹಾಕಿದರೂ ಅಥವಾ ಪಂಜರಕ್ಕೆ ಹಾಕಿದರೂ ಹುಲಿಯೇ ಎಂದು ವ್ಯಾಖ್ಯಾನಿಸಿದರು.

Facebook Comments

Sri Raghav

Admin