ಲಾಕ್ಡೌನ್ನಲ್ಲೂ ರೈತರಿಗೆ ಸ್ಪಂದಿಸಿದ ಸರ್ಕಾರ : ಸಚಿವ ನಾರಾಯಣಗೌಡ
ಬೆಂಗಳೂರು, ಸೆ.22- ಕೊರೊನಾ ಸೋಂಕಿನಿಂದ ಲಾಕ್ಡೌನ್ ವೇಳೆ ರೈತರ ಜಮೀನಿನಲ್ಲಿ ಬೆಳೆದ ಹಣ್ಣು-ತರಕಾರಿಗಳನ್ನು ಕೊಳೆಯಲು ಬಿಡದೆ ಸರ್ಕಾರ ಹಾಪ್ಕಾಮ್ಸ್ ಮೂಲಕ ಖರೀದಿ ಮಾಡಿ, ಗ್ರಾಹಕರಿಗೆ ತಲುಪಿಸಿದೆ ಮತ್ತು ಒಂದಷ್ಟನ್ನು ನೆರೆ ರಾಜ್ಯ ಹಾಗೂ ವಿದೇಶಗಳಿಗೆ ರಫ್ತು ಮಾಡಿದೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು ನೀಡಿದ ಈ ಉತ್ತರ ವಿಪಕ್ಷಗಳ ಸದಸ್ಯರನ್ನು ಕೆರಳಿಸಿತ್ತು. ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು ರಾಜ್ಯ ಸರ್ಕಾರ ಹೂ ಬೆಳೆಗಾರರಿಗೆ ಎಕರೆಗೆ 25 ಸಾವಿರ ರೂ. ಕೊಡುವುದಾಗಿ ಹೇಳಿತ್ತು. ಎಷ್ಟು ಜನರಿಗೆ ಹಣ ನೀಡಲಾಗಿದೆ ಎಂದು ಪ್ರಶ್ನಿಸಿದ್ದರು.
ಲಾಕ್ಡೌನ್ ವೇಳೆ ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಮಾರಾಟ ಮಾಡಲಾಗದೆ ಕೊಳೆಯಲು ಬಿಟ್ಟು ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ನಲ್ಲಿ ಎಷ್ಟು ಹಣ ರೈತರಿಗೆ ತಲುಪಿದೆ. ಕೇಂದ್ರ ಸರ್ಕಾರದ 22 ಲಕ್ಷ ಕೋಟಿ ರೂ. ಪ್ಯಾಕೇಜ್ನಲ್ಲಿ ರಾಜ್ಯದ ರೈತರಿಗೆ ಎಷ್ಟು ನೆರವಾಗಿದೆ ಎಂದು ಕೇಳಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಲಾಕ್ಡೌನ್ ವೇಳೆ ಸರ್ಕಾರ ಹಾಪ್ ಕಾಮ್ಸ್ ಮೂಲಕ ಹಣ್ಣು-ತರಕಾರಿಗಳನ್ನು ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸಿದೆ. ಯಾವುದೇ ರೈತನ ಹೊಲದಲ್ಲಿ ಬೆಳೆ ಕೊಳೆಯಲು ಬಿಟ್ಟಿಲ್ಲ. 150 ಟನ್ ತರಕಾರಿಗಳನ್ನು ಖರೀದಿಸಿ ಹಂಚಿದ್ದೇವೆ. 8 ಟನ್ ತರಕಾರಿಯನ್ನು ಕೇರಳ ಮತ್ತು ತಮಿಳುನಾಡಿಗೆ ರಫ್ತು ಮಾಡಲಾಗಿದೆ. ಕೆಲವೆಡೆ ಶಾಸಕರು ಕೂಡ ಸಹಕರಿಸಿದ್ದಾರೆ ಎಂದು ಹೇಳಿದರು.
ಇದನ್ನು ಬಲವಾಗಿ ವಿರೋಧಿಸಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಲಾಕ್ಡೌನ್ ವೇಳೆ ಯಾವ ಹಾಪ್ಕಾಮ್ಸ್ ಕೂಡ ತೆರೆದಿರಲಿಲ್ಲ. ರೈತರು ಬೆಳೆದ ಬೆಳೆಗಳನ್ನು ಸಾಗಿಸಲಾಗದೆ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, ಸಾರಿಗೆ ಸೌಲಭ್ಯವೇ ಬಂದ್ ಆಗಿತ್ತು, ಎಲ್ಲಿಂದ ಎಲ್ಲಿಗೆ ತರಕಾರಿ ಸಾಗಿಸಿದ್ದಿರಾ ಎಂದು ಪ್ರಶ್ನಿಸಿದ್ದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಲಾಕ್ಡೌನ್ ವೇಳೆ ಸಾರಿಗೆ ಇಲಾಖೆಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿತ್ತು. ಹಳ್ಳಿಗಳಿಂದಲೂ ಫೋನ್ ಕರೆಗಳು ಬಂದಿವೆ. ವಾಹನಗಳು ಹಳ್ಳಿಗಳಿಗೆ ಹೋಗಿ ತರಕಾರಿ ಖರೀದಿಸಿ ತಂದಿವೆ ಎಂದರು. ಸಚಿವರ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳ ಶಾಸಕರು ಗದ್ದಲ ಎಬ್ಬಿಸಿದರು. ಆಡಳಿತ ಪಕ್ಷದಿಂದಲೂ ಪ್ರತಿಯಾಗಿ ಗದ್ದಲ ಉಂಟಾಯಿತು.