ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ : ಸಚಿವ ನಾರಾಯಣಗೌಡ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.30- ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಮಾಡುವುದಾಗಿ ಮಾತುಕೊಟ್ಟರೆ ಎಂದಿಗೂ ಮಾತು ತಪ್ಪುವುದಿಲ್ಲ. ಶಿರಾ ಕ್ಷೇತ್ರವನ್ನು ಮೂರನೆ ಶಿಕಾರಿಪುರವನ್ನಾಗಿ ಮಾಡುತ್ತಾರೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು.

ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಮದಲೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ. ಮಂಡ್ಯ ಜಿಲ್ಲಾಯಲ್ಲಿ ನನ್ನನ್ನು ಗೆಲ್ಲಿಸಿದರು. ಮೂರು ಖಾತೆ ನೀಡಿ ಸಚಿವನನ್ನಾಗಿ ಮಾಡಿದರು. ಮಂಡ್ಯ ಜಿಲ್ಲಾಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎನ್ನುತ್ತಿದ್ದರು. ಆದರೆ, ಈಗ ಯಡಿಯೂರಪ್ಪ ಅವರ ಕನಸು ನೆರವೇರಿದೆ ಎಂದರು.

ಕೆಆರ್ ಪೇಟೆಯನ್ನು ಗೆಲ್ಲಿಸಿದರೆ ಎರಡನೆ ಶಿಕಾರಿಪುರ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಅದರಂತೆ ಈಗ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗುತ್ತಿದೆ. ವಿಜಯೇಂದ್ರ ಅವರು ಕೆಆರ್ ಪೇಟೆ ಚುನಾವಣೆ ನೇತೃತ್ವ ವಹಿಸಿದ್ದರು. ಅವರು ಕೊಟ್ಟ ಮಾತಿನಂತೆ ಈಗ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

150 ಹಾಸಿಗೆಯ ಹೈಟೆಕ್ ಆಸ್ಪತ್ರೆ ಬರುತ್ತಿದೆ. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರನ್ನು ಗೆಲ್ಲಿಸಿಕೊಡಿ. ಕ್ಷೇತ್ರವನ್ನು ಮೂರನೆ ಶಿಕಾರಿಪುರ ಮಾಡುತ್ತಾರೆ ಎಂಬ ಭರವಸೆ ನೀಡಿದರು. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಹರಿದುಬರುತ್ತದೆ. ಇದಕ್ಕೆ ಉದಾಹರಣೆ ಕೆಆರ್ ಪೇಟೆ ಕ್ಷೇತ್ರ. ಅದೇ ರೀತಿ ಶಿರಾ ಕ್ಷೇತ್ರ ಕೂಡ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

Facebook Comments