ನಾರಾಯಣ ಗೌಡ ಮೇಲೆ ಚಪ್ಪಲಿ ಎಸೆದ ಪ್ರಕರಣ ದಲ್ಲಿ ಜೆಡಿಎಸ್ ಕಾರ್ಯಕರ್ತರ ಬಂಧನ-ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ನ.19-ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣ ಗೌಡ ಅವರು ನಾಮತ್ರ ಸಲ್ಲಿಸಲು ತೆರಳಿದ್ದ ವೇಳೆ ಅವರತ್ತ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ಕೆ.ಆರ್.ಪೇಟೆ ಪಟ್ಟಣ ಠಾಣೆ ಪೊಲೀಸರು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದರು.

ಈ ವಿಷಯ ತಿಳಿದ ಜೆಡಿಎಸ್ ಮುಖಂಡರು ರಾತ್ರಿ ಠಾಣೆ ಮುಂದೆ ಜಮಾಯಿಸಿ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ನಾಲ್ವರು ಕಾರ್ಯಕರ್ತ್ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಹಲವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾದ್ದರಿಂದ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ನಾರಾಯಣಗೌಡ ಅವರು ನಾಮಪತ್ರ ಸಲ್ಲಿಸಲು ನೂರಾರು ಬೆಂಬಲಿಗರು, ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಬರುತ್ತಿದ್ದ ವೇಳೆ ಕೆಲವು ಜೆಡಿಎಸ್ ಕಾರ್ಯಕರ್ತರು ಇವರತ್ತ ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ಕೆ.ಆರ್.ಪೇಟೆ ಒಂದು ರೀತಿ ಅಕ್ಷರಶಃ ರಣರಂಗವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು. ನಾರಾಯಣಗೌಡರು ಜೆಡಿಎಸ್‍ಗೆ ದ್ರೋಹ ಬಗೆದಿದ್ದಾರೆ ಎಂದು ಜೆಡಿಎಸ್ ಬಾವುಟ ಹಿಡಿದಿದ್ದ ಕಾರ್ಯಕರ್ತರು ಆಕ್ರೋಶಭರಿತರಾಗಿ ಘೋಷಣೆ ಕೂಗುತ್ತಿದ್ದಾಗ ಪೊಲೀಸರು ನಾರಾಯಣಗೌಡರಿಗೆ ಭದ್ರತೆ ಒದಗಿಸಿ ತಮ್ಮ ಕಾರಿನಲ್ಲೇ ಕರೆದೊಯ್ದರು.

 

Facebook Comments