ಕದ್ದುಮುಚ್ಚಿ ಊರಿಗೆ ಬರುವುದು ದ್ರೋಹ: ಸಚಿವ ನಾರಾಯಣಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ಜೂ.5- ತಾಲ್ಲೂಕಿಗೆ ಜನ ಕದ್ದುಮುಚ್ಚಿ ಬರುವುದನ್ನು ನಿಲ್ಲಿಸಿ ಜಿಲ್ಲಾಡಳಿತ ಇಲ್ಲವೆ ತಾಲ್ಲೂಕು ಆಡಳಿತಕ್ಕೆ ಸೇವಾಸಿಂಧು ಯೋಜನೆಯಡಿ ಅರ್ಜಿ ಸಲ್ಲಿಸಿ ಬರಬಹುದಾಗಿದೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಇಂದಿಲ್ಲಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ಸ್ಕೂಟರ್‍ಗಳನ್ನು ವಿತರಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಬರುತ್ತಿದೆ. ಹೊರರಾಜ್ಯಗಳ ಜನರು ಕದ್ದುಮುಚ್ಚಿ ಅಡ್ಡದಾರಿಯಲ್ಲಿ ಬರುವ ಅಗತ್ಯವಿಲ್ಲ. ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿ ಅವರು ಸೂಚಿಸಿದ ಅವಧಿಯಲ್ಲಿ ಬರಬಹುದಾಗಿದೆ ಎಂದರು.

ಹೊರರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್‍ಲ್ಲಿದ್ದು, ಸೋಂಕು ನಿಯಂತ್ರಣ ಕಾರ್ಯಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.ಕ್ವಾರಂಟೈನ್ ಸಂದರ್ಭದಲ್ಲಿ ಪಾಸಿಟಿವ್ ಬಂದರೆ ಸೂಕ್ತ ಚಿಕಿತ್ಸೆ ಪಡೆದು ರೋಗಮುಕ್ತರಾಗಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಅವಿತು ಕುಳಿತರೆ ಸಮಾಜಕ್ಕೆ ದ್ರೋಹ ಮಾಡಿದಂತಾಗುತ್ತದೆ. ಹೀಗಾಗಿ ಯಾರೂ ಇಂತಹ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರ ಕೊರೊನಾ ಚಿಕಿತ್ಸೆಗಾಗಿ ಎಲ್ಲಾ ತಾಲ್ಲೂಕುಗಳಿಗೆ 60ಲಕ್ಷ ರೂ.ಗಳಿಂದ 75ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಸಚಿವ ನಾರಾಯಣಗೌಡ ವಿವರಿಸಿದರು.ತಾಲ್ಲೂಕಿನಲ್ಲಿ 17 ವಿವಿಧ ಸಾಂಸ್ಥಿಕ ಕೇಂದ್ರಗಳಲ್ಲಿ 1150ಕ್ಕೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರಸ್ತುತ 900ಕ್ಕೂ ಹೆಚ್ಚು ಜನರು 14 ದಿನಗಳ ಕ್ವಾರಂಟೈನ್ ಮುಗಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.

ಗ್ರಾಮದ ತಮ್ಮ ಮನೆಗಳಿಗೆ ತೆರಳಿರುವ ಹೊರ ರಾಜ್ಯಗಳ ಜನರು ತಮ್ಮ ತಮ್ಮ ಮನೆಗಳಲ್ಲಿ ಮತ್ತೆ 14 ದಿನಗಳು ಕ್ವಾರಂಟೈನ್‍ನಲ್ಲಿರಬೇಕು. ತಾಲ್ಲೂಕಿನಲ್ಲಿ 235 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಸೋಂಕು ನಿವಾರಿಸುವ ಈ ಪ್ರಯತ್ನಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಸಚಿವರು ವಿನಂತಿಸಿಕೊಂಡರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಪಾಂಡವಪುರ ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜ, ತಹಸೀಲ್ದಾರ್ ಎಂ.ಶಿವಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.

Facebook Comments