ಮೈ ಶುಗರ್ ಕಾರ್ಖಾನೆ ಆರಂಭ ಖಚಿತ : ಸಚಿವ ನಾರಾಯಣಗೌಡ
ಕೆಆರ್ ಪೇಟೆ, ಜು.4- ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯುತ್ತಿದೆ. ಹಾಗಾಗಿ ನಾಗಮಂಗಲ ಶಾಸಕ ಸುರೇಶ್ಗೌಡ ಅವರಿಗೆ ಈಗಾಗಲೇ ಮುಂಬರುವ ಚುನಾವಣೆಯ ಸೋಲಿನ ಭಯ ಆರಂಭವಾಗಿದೆ.
ಇದರಿಂದಾಗಿ ಜಿಲ್ಲಾ ಮಂತ್ರಿಯಾದ ನನ್ನ ವಿರುದ್ಧ ಇಲ್ಲಸಲ್ಲದ ಟೀಕೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
ಪಟ್ಟಣದ ವಿವಿಧ ವಾರ್ಡುಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಅವರು. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. ಹಾಗಾಗಿ ಉಳಿದ ಅಧಿಕಾರದ ಅವಧಿಯಲ್ಲಿ ಮಂಡ್ಯ ಜಿಲ್ಲೆಯ 7 ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದಾರೆ.
ಈಗಾಗಲೇ ಪಾಂಡವಪುರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ನಿರಾಣಿ ಗ್ರೂಪ್ಸ್ ಕಂಪೆನಿಯ ಮೂಲಕ ಹಸಿರು ನಿಶಾನೆ ತೋರಿದ್ದಾರೆ. ಅದೇ ರೀತಿ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಕಾರ್ಖಾನೆಯನ್ನು ಒ ಅಂಡ್ ಎಂ ಆಧಾರದಲ್ಲಿ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಆದರೆ, ಜೆಡಿಎಸ್ ಪಕ್ಷದವರು ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು ಎಂಬ ಹಠಮಾರಿತನ ಹೊಂದಿದ್ದು, ಕಾರ್ಖಾನೆಯ ಆರಂಭಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ.
ಸುಮಾರು 15 ತಿಂಗಳು ಅಧಿಕಾರ ನಡೆಸಿದ ಕುಮಾರಸ್ವಾಮಿ ಅವರು ಕಾರ್ಖಾನೆಯ ಆರಂಭಕ್ಕೆ ಯಾವುದೇ ಪ್ರಯತ್ನ ಮಾಡಿಲ್ಲ. ಯಾರು ಏನೇ ಹೇಳಲಿ ಮೈಷುಗರ್ ಕಾರ್ಖಾನೆಯು ಈ ಬಾರಿ ಸಕಾಲದಲ್ಲಿ ಆರಂಭವಾಗುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಪಂ ಮಾಜಿ ಉಪಾಧ್ಯಕ್ಷರಾದ ಕೆ.ಎಸ್.ಪ್ರಭಾಕರ್, ಎಸ್.ಅಂಬರೀಶ್, ಜಿಪಂ ಮಾಜಿ ಸದಸ್ಯ ಎ.ಎಸ್.ಮಂಜುನಾಥ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ಕುಮಾರ್, ಪುರಸಭೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.