ಇಬ್ಬರು ಆರೋಪಿಗಳ ಬಂಧನ : 4.60 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.2- ವಿದ್ಯಾರ್ಥಿಗಳಿಗೆ ಹಾಗೂ ಐಟಿಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ಮೈಕೋಲೇಔಟ್ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 12 ಕೆಜಿ ಗಾಂಜಾ, 69 ಎಸ್‍ಎಸ್‍ಡಿಪೇಪರ್ ಸೇರಿದಂತೆ 4.60ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೊಮ್ಮನಹಳ್ಳಿಯ ರೆಸಿಡೆನ್ಸಿ ಶಾಲೆಯ ಹತ್ತಿರದ ನಿವಾಸಿ ಜಿಲಾಲ್‍ಖಾನ್ ಅಲಿಯಾಸ್ ಜುನೈದ್ ಖಾನ್ (20), ಕೋರಮಂಗಲದ ಲಕ್ಕಸಂದ್ರದ ನಿವಾಸಿ ನಿಶಾಂತ್ ಹರಿರಾಮ್ (25) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಜಿಲಾಲ್‍ಖಾನ್ ಬೊಮ್ಮನಹಳ್ಳಿಯಲ್ಲಿ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶದಿಂದ ಗಾಂಜಾವನ್ನು ಕಡಿಮೆ ಬೆಲೆಗೆ ತರಿಸಿ ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈತನಿಂದ 8ಕೆಜಿ 800 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದ ಆರೋಪಿಯಾದ ನಿಶಾಂತ್ ಹರಿರಾಮ್ ಖಾಸಗಿ ಕಂಪೆನಿ ನೌಕರನಾಗಿದ್ದು, ತಮಿಳುನಾಡು ಮೂಲದವನಾಗಿದ್ದಾನೆ.

ಈತ ಕೂಡ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ. 3ಕೆಜಿ 200 ಗ್ರಾಂ ಗಾಂಜಾ, 69 ಎಲ್‍ಎಸ್‍ಡಿ ಪೇಪರ್, 22 ಗ್ರಾಂ ಎಂಡಿಎಂಎ, 22 ಟ್ಯಾಬ್ಲೆಟ್, ಒಂದು ದ್ವಿಚಕ್ರವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬಿಟಿಎಂ ಲೇಔಟ್ ಎರಡನೇ ಹಂತ , ಬನ್ನೇರುಘಟ್ಟ ರಸ್ತೆ ಹಾಗೂ ಇತರ ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments