ನರೇಗಾ ಯೋಜನೆಯಡಿ ಕೂಲಿಕಾರರ ಖಾತೆಗಳಿಗೆ 3926.37 ಕೋಟಿ ರೂ. ಜಮೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.29- ನರೇಗಾ ಯೋಜನೆಯಡಿ 15 ಕೋಟಿ ದುಡಿಯುವ ಮಾನವ ದಿನಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಐದು ವರ್ಷಗಳಲ್ಲೇ ಅತಿಹೆಚ್ಚು ಹಾಗೂ ರಾಷ್ಟ್ರದಲ್ಲಿಯೇ ಅಗ್ರ ಸ್ಥಾನದಲ್ಲಿ 14.58 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದ್ದು, 3926.37 ಕೋಟಿ ರೂ.ಗಳನ್ನು ನೇರವಾಗಿ ಕೂಲಿಕಾರರ ಖಾತೆಗಳಿಗೆ ಹಾಕಲಾಗಿದೆ.

ಪ್ರಸಕ್ತ ವರ್ಷಾರಂಭದಲ್ಲಿ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿ ನೀಡಲಾಗಿತ್ತು.ಕೇಂದ್ರ ಸರ್ಕಾರ ಅದನ್ನು 14.65 ಕೋಟಿ ಮಾನವ ದಿನಗಳಿಗೆ ಪರಿಷ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯಕ್ಕೆ 800 ಕೋಟಿ ರೂ. ಹೆಚ್ಚುವರಿ ಅನುದಾನ ಲಭ್ಯವಾಗಿದೆ.

# ಕೂಲಿ ದರ ಹೆಚ್ಚಳ:

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನರೇಗಾ ಯೋಜನೆಯಡಿ ದಿನಗೂಲಿಯನ್ನು 289 ರೂ.ಗೆ ಹೆಚ್ಚಿಸಲಾಗಿದ್ದು, ಇದರ ಜೊತೆಗೆ ಪ್ರತಿದಿನ 10 ರೂ. ಸಲಕರಣೆ ವೆಚ್ಚವನ್ನು ಕೂಲಿಗಾರರಿಗೆ ನೀಡಲಾಗುತ್ತದೆ ಎಂದರು.

ಮಾ.15ರಿಂದ ಮೂರು ತಿಂಗಳ ಅವಧಿಗೆ ದುಡಿಯೋಣ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 51,800 ಹೆಕ್ಟೇರ್ ತೋಟಗಾರಿಕಾ ಬೆಳೆ ವಿಸ್ತರಣೆಯಾಗಿದೆ. ಈ ವರ್ಷ 7.01 ಲಕ್ಷ ಹೊಸ ಜಾಬ್ ಕಾರ್ಡ್ ನೀಡುವ ಮೂಲಕ 16.68 ಲಕ್ಷ ಜನರು ನರೇಗಾ ಯೋಜನೆಗೆ ಸೇರ್ಪಡೆಯಾಗಿದ್ದಾರೆ. 5 ವರ್ಷದಲ್ಲೇ ಅತಿಹೆಚ್ಚು 29.93 ಲಕ್ಷ ಕುಟುಂಬಗಳ 56.29 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. 2.23 ಲಕ್ಷ ಕುಟುಂಬಗಳು 100 ದಿನಗಳ ಉದ್ಯೋಗವನ್ನು ಪೂರೈಸಿವೆ ಎಂದು ಅವರು ಹೇಳಿದರು.

Facebook Comments