ಇಂಧನ ವಲಯದ ಮುಖ್ಯಸ್ಥರ ಜತೆ ಪ್ರಧಾನಿ ಮೋದಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಹೌಸ್ಟನ್, ಸೆ.22- ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರದ ಅಮೆರಿಕಾ ಪ್ರವಾಸ ವಿಧ್ಯುಕ್ತವಾಗಿ ಆರಂಭವಾಗಿದೆ. ಅಮೆರಿಕದ ತೈಲ ರಾಜಧಾನಿ ಟೆಕ್ಸಾಸ್‍ನ ಹೌಸ್ಟನ್ ಪ್ರಾಂತ್ಯದಲ್ಲಿ ಇಂದು ಅಧಿಕೃತ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡರು. ಇಂಧನ ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸಭೆಯಲ್ಲಿ ಎರಡೂ ದೇಶಗಳು ಇಂಧನ ವಲಯದಲ್ಲಿ, ಭದ್ರತೆ ಮತ್ತು ಪರಸ್ಪರ ಹೂಡಿಕೆ ಅವಕಾಶಗಳ ವಿಸ್ತರಣೆಗೆ ಒಟ್ಟಾಗಿ ಕೆಲಸ ಮಾಡಲು ಗಮನ ಹರಿಸುವ ಕುರಿತು ಮಾತುಕತೆ ನಡೆಸಲಾಯಿತು. ಉದ್ಯಮದ ಕುರಿತು ಚರ್ಚೆಯಾಯಿತು. ಹೌಸ್ಟನ್‍ನಲ್ಲಿ ದುಂಡುಮೇಜಿನ ಸಭೆಯಲ್ಲಿ ಇಂಧನ ವಲಯ ಸಿಇಒಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಫಲಪ್ರದ ಮಾತುಕತೆ ನಡೆಸಿದರು.

ಇಂಧನ ಭದ್ರತೆ ಮತ್ತು ಪರಸ್ಪರ ಹೂಡಿಕೆ ಅವಕಾಶಗಳನ್ನು ಭಾರತ ಮತ್ತು ಅಮೆರಿಕಾದಲ್ಲಿ ವಿಸ್ತರಿಸಲು ಮಾತುಕತೆ ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಮೆರಿಕಾದಲ್ಲಿರುವ ಕೆಲವು ಉನ್ನತ ಮಟ್ಟದ ತೈಲ ಕಂಪೆನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುವ ಫೋಟೋಗಳನ್ನು ಟ್ವೀಟರ್‍ನಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಿಸಿದೆ.

ಇದೇ ಸಂದರ್ಭದಲ್ಲಿ ಮೋದಿ ನೇತೃತ್ವದ ಭಾರತೀಯ ನಿಯೋಗ ಮತ್ತು ಅಮೆರಿಕದ ತೈಲ ಸಂಸ್ಥೆಗಳ ಮುಖ್ಯಸ್ಥರ ನಡುವೆ ಕೆಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಇಂದು ಬಹುನಿರೀಕ್ಷಿತ ಹೌಡಿ-ಮೋಡಿ ಕಾರ್ಯಕ್ರಮ ಹೌಸ್ಟನ್‍ನಲ್ಲಿ ನಡೆಯಲಿದ್ದು ಸುಮಾರು 50 ಸಾವಿರಕ್ಕೂ ಅಧಿಕ ಭಾರತೀಯ ಅಮೆರಿಕನ್ನರು ಭಾಗವಹಿಸುವರು.

ಮೋದಿಯವರ ಹೌಸ್ಟನ್ ಭೇಟಿಯಿಂದ ಭಾರತೀಯ ಮೂಲದ ಅಮೆರಿಕನ್ನರು ಸಂಪ್ರೀತರಾಗಿದ್ದು, ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಅಮೆರಿಕದ ಖ್ಯಾತ ರಾಜತಾಂತ್ರಿಕರು ಮತ್ತು ಗಣ್ಯರು ವಿಶ್ಲೇಷಿಸಿದ್ದಾರೆ.

Facebook Comments