ನ್ಯಾಯ ದೇಗುಲದಿಂದ ಶತಮಾನದ ವಿವಾದ ಅಂತ್ಯ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.9 (ಪಿಟಿಐ)- ಅಯೋಧ್ಯೆಯಲ್ಲಿನ ರಾಮಮಂದಿರ-ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಗಣ್ಯಾತಿಗಣ್ಯರು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ ನ್ಯಾಯದೇಗುಲದಿಂದ ಶತಮಾನದ ವಿವಾದಕ್ಕೆ ತಾರ್ಕಿಕ ಅಂತ್ಯ ಕಂಡಂತಾಗಿದೆ ಎಂದಿದ್ದಾರೆ.

ಈ ತೀರ್ಪು ಯಾರ ಗೆಲುವು ಅಲ್ಲ, ಯಾರ ಸೋಲು ಅಲ್ಲ. ಇದನ್ನು ಎಲ್ಲರೂ ಗೌರವಿಸಬೇಕು. ಈ ತೀರ್ಪಿನಿಂದ ಜನರ ನಂಬಿಕೆ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ಅವರಿಗಿರುವ ವಿಶ್ವಾಸ ಮತ್ತಷ್ಟು ವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕ್ರಿಯೆ ನೀಡಿ, ದೇಶದ ಇತಿಹಾಸದಲ್ಲೇ ಇದು ಮಹತ್ವದ ಮೈಲಿಗಲ್ಲು.

ಈ ತೀರ್ಪು ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‍ನ ತೀರ್ಪನ್ನು ಸ್ವಾಗತಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ಈ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಿ ಸಮಾನ ದೃಷ್ಟಿಕೋನದಿಂದ ನೋಡಬೇಕು ಎಂದು ಹೇಳಿದ್ದಾರೆ.

ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ತೀರ್ಪಿನ ಬಗ್ಗೆ ಮಾತನಾಡಿ, ಇದು ಯಾವ ಸಮುದಾಯದ ಪರ ಅಥವಾ ವಿರೋಧವೂ ಅಲ್ಲ, ಅಥವಾ ಜಯ-ಅಪಜಯವೂ ಅಲ್ಲ. ನೂರು ವರ್ಷಗಳಿಗೂ ಹೆಚ್ಚು ಕಾಲದ ವಿವಾದ ಕೊನೆಗೂ ಬಗೆಹರಿದಿದೆ. ಈ ತೀರ್ಪಿನಂತೆ ಪ್ರತಿಯೊಬ್ಬರೂ ನಡೆದುಕೊಂಡು ಅದರ ಆದೇಶಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

Facebook Comments