ಪಾಕ್ ಮತ್ತು ಚೀನಾಗೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆವಾಡಿಯಾ (ಗುಜರಾತ್),ಅ.31-ರಾಷ್ಟ್ರದ ಏಕತೆ ಮತ್ತು ಅಖಂಡತೆ ರಕ್ಷಣೆಗೆ ನಾವು ಕಂಕಣಬದ್ಧರಾಗಿದ್ದೇವೆ ಎಂದು ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆ ಮತ್ತು ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವ ಯಾವುದೇ ಶಕ್ತಿಗಳು ಒಡ್ಡಿರುವ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧವಾಗಿದ್ದೇವೆ ಎಂದು ಪಾಕಿಸ್ತಾನ ಮತ್ತು ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಪಾಕ್‍ಗೆ ಬೆಂಬಲ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ಪಿಂಗ್ ಅವರಿಗೆ ಪ್ರಧಾನಮಂತ್ರಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಉಕ್ಕಿನ ಮನುಷ್ಯ ಮತ್ತು ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭವಾಯಿ ಪಟೇಲರ 145ನೆ ಜನ್ಮಜಯಂತಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನಾಚರಣೆ ಸಂದರ್ಭದಲ್ಲೇ ಭಾರತದ ಏಕತೆ ಮತ್ತು ಅಖಂಡತೆ ರಕ್ಷಣೆಗೆ ಕೇಂದ್ರ ಸರ್ಕಾರ ಟೊಂಕಕಟ್ಟಿ ನಿಂತಿದೆ ಎಂದು ಅವರು ಹೇಳಿದ್ದಾರೆ.

ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಜ್ಯದ ಜೀವನದಿಯ ತಟದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಪಟೇಲರ ಪುತ್ಥಳಿಗೆ (ಪ್ರತಿಮೆ) ಪುಪ್ಪ ನಮನ ಸಲ್ಲಿಸಿ ಉಕ್ಕಿನ ಮನುಷ್ಯನ ಸನ್ನಿಧಿಯಲ್ಲೇ ಪಾಕಿಸ್ತಾನ ಮತ್ತು ಚೀನಾಗೆ ಅವರು ಗಂಭೀರ ಎಚ್ಚರಿಕೆ ನೀಡಿದರು. ಪಾಕಿಸ್ತಾನದ ಭಯೋತ್ಪಾದನೆಯ ನಿಜವಾದ ಮುಖವಾಡ ಕಳಚಿದೆ. ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಿಜವನ್ನು ಪಾಕಿಸ್ತಾನವೇ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ. ಇದು ಆ ದೇಶದ ಧೂರ್ತತನಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಗುಡುಗಿದರು.

ಪುಲ್ವಾಮಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರಿಂದ ಬಸ್ ಮೇಲೆ ನಡೆದ ಕಾರ್ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಹತರಾಗಿದ್ದರು. ಮೊನ್ನೆ ಪಾಕಿಸ್ತಾನದ ಸಂಸತ್ತಿನಲ್ಲಿ ಆ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವದ್ ಚೌಧರಿ ಅವರು ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಪಾಕ್ ಪಾತ್ರವನ್ನು ಒಪ್ಪಿಕೊಂಡಿದ್ದರು.

ಈ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪಾಕಿಸ್ತಾನದ ನಿಜ ಬಣ್ಣ ಅಧಿಕೃತವಾಗಿಯೇ ಬಯಲಾಗಿದೆ ಎಂದು ಟೀಕಿಸಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಪುಲ್ವಾಮಾ ದಾಳಿಯಲ್ಲಿ ನಮ್ಮ ವೀರಯೋಧರು ಹುತಾತ್ಮರಾದಾಗ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿತ್ತು. ಆದರೆ, ಕೆಲವು ವ್ಯಕ್ತಿಗಳು (ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಮುಖಂಡರು) ತಮ್ಮ ರಾಜಕೀಯ ಲಾಭಗಳಿಗಾಗಿ ಹೊಲಸು ರಾಜಕೀಯದಲ್ಲಿ ತೊಡಗಿದ್ದವು ಎಂದು ಪ್ರಧಾನಿ ಹರಿಹಾಯ್ದರು.

ಪುಲ್ವಾಮಾ ದಾಳಿ ನಂತರ ಕೆಲವರು ನೀಡಿದ ಅನಗತ್ಯ ಹೇಳಿಕೆಗಳನ್ನು ಈ ದೇಶದ ಜನರು ಮರೆಯುವುದಿಲ್ಲ. ಯೋಧರು ಪ್ರಾಣಾರ್ಪಣೆ ಮಾಡಿದ ಯಾತನೆಯಲ್ಲಿ ದೇಶದ ಜನರು ನರಳುತ್ತಿದ್ದಾಗ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ದುರಹಂಕಾರದಿಂದ ಹೊಲಸು ರಾಜಕೀಯ ಮಾಡಿ ದೇಶದ ಜನರ ಮನ ನೋಯಿಸಿದ್ದಾರೆ ಎಂದು ಮೋದಿ ತರಾಟೆಗೆ ತೆಗೆದುಕೊಂಡರು.

ಪಾಕಿಸ್ತಾನವು ಸಂಸತ್ತಿನಲ್ಲಿ ಪುಲ್ವಾಮಾ ದಾಳಿಗೆ ತಾನೇ ಕಾರಣ ಎಂಬುದನ್ನು ಒಪ್ಪಿಕೊಂಡಿರುವುದರಿಂದ ಪಾಕ್ ಸರ್ಕಾರದ ನಿಜವಾದ ಮುಖವಾಡ ಕಳಚಿಯೆಲ್ಲದೆ ಇದರಿಂದ ಕೆಲವರ ನಿಜವಾದ ಬಣ್ಣವೂ ಬಯಲಾಗಿದೆ ಎಂದು ಪ್ರತಿಪಕ್ಷಗಳ ಮೇಲೆ ಪ್ರಧಾನಿ ತೀಕ್ಷ್ಣ ವಾಗ್ದಾಳಿ ನಡೆಸಿದರು.  ಪುಲ್ವಾಮಾ ದಾಳಿ ನಂತರ ಕೆಲವರು ನಡೆಸಿದ ರಾಜಕೀಯವು ಅಂಥ ಮಂದಿ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ತೋರಿಸಿದೆ.

ಇಂಥ ಹೊಸಲು ರಾಜಕೀಯದಿಂದ ನಮ್ಮ ಭದ್ರತಾ ಪಡೆಗಳ ನೈತಿಕ ಸ್ಥೈರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಇನ್ನು ಮುಂದಾದರೂ ಇಂಥ ಮಂದಿ ಇಂಥ ಕೆಟ್ಟ ರಾಜಕೀಯದಲ್ಲಿ ತೊಡಗಬಾರದೆಂದು ಪ್ರಧಾನಿ ತಾಕೀತು ಮಾಡಿದರು. ತಿಳಿದೋ ಅಥವಾ ತಿಳಿದೆಯೋ ರಾಷ್ಟ್ರವಿರೋಧ ಶಕ್ತಿಗಳ ಕೈಯಲ್ಲಿ ನೀವು (ವಿರೋಧ ಪಕ್ಷಗಳು) ಕೈಗೊಂಬೆಯಾಗಬಾರದು ಎಂದು ಮೋದಿ ಎಚ್ಚರಿಕೆ ನೀಡಿದರು.

Facebook Comments