ಕೊರೊನಾ ಲಸಿಕೆ ವಿತರಣೆಗೆ ಟಾಸ್ಕ್ ಫೋರ್ಸ್ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.4- ಕೊರೊನಾಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಅಂತಿಮ ಹಂತದಲ್ಲಿದ್ದಾರೆ. ಕೆಲವೇ ವಾರಗಳಲ್ಲಿ ಅದು ನಮಗೆ ಸಿಗಲಿದೆ. ಇದರ ವಿತರಣೆಗಾಗಿ ಟಾಸ್ಕ್‍ಫೋರ್ಸ್‍ಗಳನ್ನು ರಚನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊರೊನಾ ಲಸಿಕೆ ಬರುವುದಕ್ಕೆ ಇನ್ನು ಹೆಚ್ಚು ಸಮಯ ಬೇಕಾಗಿಲ್ಲ. ಈಗಾಗಲೇ ಲಸಿಕೆ ತಯಾರಿಕಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಕೆಲವೇ ವಾರಗಳು ಕಾಯಬೇಕಾಗಿದೆ. ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಅವರು ಇಂದು ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಲಸಿಕೆ ದರ ನಿಗದಿ ಹಾಗೂ ಇತರ ವಿಷಯಗಳ ಬಗ್ಗೆ ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ವಿತರಣೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ. ಈ ಬಗ್ಗೆ ಸಂತಸ ಪಡುವ ವಿಷಯಗಳು ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸಭೆಯಲ್ಲಿ ಇಂದು ಹಿರಿಯ ಸಚಿವರೊಂದಿಗೆ ಬಹುತೇಕ ಎಲ್ಲಾ ಪಕ್ಷಗಳ ನಾಯಕರು ಸದನದಲ್ಲಿನ ವಿವಿಧ ಪಕ್ಷಗಳ ಸಭಾ ನಾಯಕರು ಪಾಲ್ಗೊಂಡಿದ್ದರು. ಇನ್ನು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವು ಮುಖಂಡರು ವರ್ಚುವಲ್ ಮೀಟಿಂಗ್‍ನಲ್ಲಿ ಪಾಲ್ಗೊಂಡು ಪ್ರಧಾನಿ ಅವರಿಗೆ ಕೆಲ ಸೂಚನೆಗಳನ್ನು ನೀಡಿದರು. ಈ ನಡುವೆ ವಿರೋಧ ಪಕ್ಷಗಳು ಕೆಲವೊಂದು ಪ್ರಶ್ನೆಗಳನ್ನು ಎತ್ತಿದ್ದು, ಇದಕ್ಕೆ ಪ್ರಧಾನಿ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.

Facebook Comments