ಕಾಶೀ ವಿಶ್ವನಾಥಗೆ ಮೋದಿ ವಿಶೇಷ ಪೂಜೆ, ಇಂದು ವಾರಾಣಸಿಯಲ್ಲಿ ವಿಜಯೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಮೇ 27-ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಅಧಿಕಾರಕ್ಕೆ ತಂದು ಎರಡನೇ ಬಾರಿ ಪ್ರಧಾನಮಂತ್ರಿಯಾಗಲಿರುವ ನರೇಂದ್ರ ಮೋದಿ ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ವಿಶ್ವವಿಖ್ಯಾತ ಕಾಶೀ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಚುನಾವಣಾ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಿದ ಅವರು, ಇಂದು ಬೆಳಗ್ಗೆ ಕಾಶೀ ವಿಶ್ವನಾಥ ದೇವಾಲಯಕ್ಕೆ ತೆರಳಿ ವಿಶ್ವನಾಥನ ಸನ್ನಿಧಿಯಲ್ಲಿ ಧ್ಯಾನಾಸಕ್ತರಾದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮೋದಿ ಜೊತೆಗಿದ್ದರು. ಗರ್ಭಗುಡಿಯ ಮುಂದೆ ಪದ್ಮಾಸನದಲ್ಲಿ ಕುಳಿತ ಶ್ವೇತವಸ್ತ್ರಧಾರಿ ಮೋದಿ, ವಿಶ್ವನಾಥನಿಗೆ ಭಕ್ತಿಪೂರ್ವಕವಾಗಿ ಕೈ ಮುಗಿದು ದೀರ್ಘ ಕಾಲ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಧಾನ ಅರ್ಚಕರಿಂದ ತೀರ್ಥ ಸೇವಿಸಿದರು.

ನಿನ್ನೆ ಸಂಜೆ ಗುಜರಾತ್‍ಗೆ ತೆರಳಿ ತಾಯಿ ಹೀರಾ ಬೆನ್ ಅವರ ಆಶೀರ್ವಾದ ಪಡೆದು ಇಂದು ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಮೋದಿ ಕಾಶೀ ವಿಶ್ವನಾಥ ದೇವಸ್ಥಾನ ಭೇಟಿ ನಂತರ ತಮ್ಮ ಸ್ವಕ್ಷೇತ್ರದಲ್ಲಿ ಇಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

4 ಲಕ್ಷಕ್ಕೂ ಅತ್ಯಧಿಕ ಮತಗಳ ಅಂತರದಿಂದ ಕಾಂಗ್ರೆಸ್‍ನ ಅಜೇಯ್‍ರಾಯ್ ಅವರನ್ನು ಮಣಿಸಿ ಎರಡನೇ ಬಾರಿ ವಾರಣಾಸಿ ಕ್ಷೇತ್ರದಿಂದ ಚುನಾಯಿತರಾಗಿರುವ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ವಾರಣಾಸಿ ಸಡಗರ ಸಂಭ್ರಮದಿಂದ ಸಜ್ಜಾಗಿದೆ.

ಈ ಪವಿತ್ರ ನಗರಿಯಲ್ಲಿಂದು ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಬಹುತೇಕ ರಸ್ತೆಗಳಲ್ಲಿ ಮೋದಿಯವರ ಭಾವಚಿತ್ರಗಳು, ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ.

ವಾರಣಾಸಿ ಜನತೆ ಮೋದಿಯವರ ವಿಜಯೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂಭ್ರಮದಿಂದ ಸಿದ್ಧರಾಗಿದ್ದರೆ, ತಮ್ಮ ಮೇಲೆ ನಂಬಿಕೆ ಇಟ್ಟು ಪ್ರಚಂಡ ಬಹುಮತದಿಂದ ಜಯಗಳಿಸಲು ನೆರವಾದ ಕ್ಷೇತ್ರದ ಮತದಾರರಿಗೆ ಮೋದಿ ಧನ್ಯವಾದ ಸಮರ್ಪಿಸಲಿದ್ದಾರೆ.

ಮೋದಿ ಭೇಟಿ ಹಿನ್ನೆಲೆಯಲ್ಲಿ ವಾರಣಾಸಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಮೋದಿ ಇದೇ 30 ರಂದು ರಾತ್ರಿ ರಾಜಧಾನಿ ದೆಹಲಿಯಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ.

Facebook Comments

Sri Raghav

Admin