ವ್ಯಾಪಾರ ಸಮರ : ಅಮೆರಿಕ ವಿರುದ್ಧ ಭಾರತ-ಚೀನಾ ಪ್ರತಿಭಟನೆಗೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜೂ. 10- ಭಾರತ ಮತ್ತು ಚೀನಾ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಅಮೆರಿಕ ವ್ಯಾಪಾರ ಸಮರ ತೀವ್ರಗೊಳಿಸಿರುವ ಬೆನ್ನಲ್ಲೇ ವಾಷಿಂಗ್ಟನ್ ವಿರುದ್ಧ ಧ್ವನಿ ಎತ್ತಲು ಉಭಯ ದೇಶಗಳು ಸಜ್ಜಾಗುತ್ತಿವೆ.

ಈ ಬಗ್ಗೆ ಚೀನಾ ಸುಳಿವು ನೀಡಿದೆ. ಈ ವಾರ ಕಿರ್ಜಕಿಸ್ತಾನ ರಾಜಧಾನಿ ಬಿಷ್‍ಕೇಕ್‍ನಲ್ಲಿರುವ ಶಾಂಗೈ ಸಹಕಾರ ಸಂಘಟನೆಯ (ಎಸ್‍ಇಒ) ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಈ ಬಗ್ಗೆ ಮುಂದಿನ ಕಾರ್ಯತಂತ್ರ ರೂಪಿಸಲಿವೆ ಎಂದು ಬೀಜಿಂಗ್ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಉತ್ತಮ ಸ್ನೇಹಿತರಾಗಿದ್ದು, ಎರಡು ದೇಶಗಳು ಅಮೆರಿಕಾದ ಇತ್ತೀಚಿನ ಆರ್ಥಿಕ ದಿಗ್ಬಂಧನದಿಂದ ತೊಂದರೆಗೀಡಾಗಿವೆ. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅಮೆರಿಕದ ಆರ್ಥಿಕ ಸಮರದ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ಚೀನಾ ಹೇಳಿದೆ.

ಜೂ. 13ರಿಂದ 15ರವರೆಗೆ ಬಿಷ್‍ಕೇಕ್‍ನಲ್ಲಿ ಎಸ್‍ಸಿಒ ಶೃಂಗಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಉಭಯ ದೇಶದ ನಾಯಕರು ಪ್ರತ್ಯೇಕವಾಗಿ ಭೇಟಿ ಮಾಡಿ ಅಮೆರಿಕಾದ ಆರ್ಥಿಕ ದಿಗ್ಬಂಧನದ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ವಿರುದ್ಧ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಬಹುವರ್ಷಗಳಿಂದಲೂ ನೀಡಲಾಗಿದ್ದ, ಆದ್ಯತೆಯ ವ್ಯಾಪಾರ ಸ್ಥಾನಮಾನವನ್ನು ರದ್ದುಗೊಳಿಸಿದೆ. ಅಲ್ಲದೆ ಚೀನಾ ವಿರುದ್ಧವು ಕೆಲವು ಕಠಿಣ ಕ್ರಮಗಳನ್ನು ವಿಧಿಸಿದೆ.

Facebook Comments