ಬಿಗ್ ನ್ಯೂಸ್ : ಚಂದ್ರನ ಮತ್ತೊಂದು ಅಚ್ಚರಿ ಸುದ್ದಿ ಬಹಿರಂಗಪಡಿಸಿದ ನಾಸಾ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.27- ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಗೋಳಾರ್ಧದಲ್ಲಿ ನೀರಿನಂಶ ಇರುವುದನ್ನು ಪತ್ತೆ ಮಾಡಿದ್ದಾರೆ. ಈವರೆಗೆ ಚಂದ್ರನ ಶೀತ ಮತ್ತು ನೆರಳಿರುವ ಪ್ರದೇಶಗಳಲ್ಲಿ ಮಾತ್ರ ಜಲ ಕಣಗಳು ಕಂಡು ಬಂದಿದ್ದವು. ಈ ಹೊಸ ಸಂಶೋಧನೆಯಿಂದ ನೀರು ಶಶಾಂಕನ ಮೇಲ್ಮೈನ ಒಂದು ಭಾಗಕ್ಕೆ ಮಾತ್ರ ಸೀಮಿತವಲ್ಲ ಎಂಬುದು ಸಾಬೀತಾಗಿದೆ.

ಚಂದಿರನ ಬೃಹತ್ ಹಳ್ಳಗಳಲ್ಲಿ ಒಂದಾದ ಕ್ಲಾವಿಸ್ ಕ್ರೇಟರ್ (ಸೂರ್ಯನ ಬೆಳಕು ಬೀಳುವ ಪ್ರದೇಶ)ನಲ್ಲಿ ನೀರಿನ ಕಣವನ್ನು ನಾಸಾದ ಅತ್ಯಾಧುನಿಕ ಸೋಫಿಯಾ- ವೀಕ್ಷಣಾಲಯ ಪತ್ತೆ ಮಾಡಿದೆ. ಈ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡ ಚಂದ್ರಯಾನ-1 ಅಭಿಯಾನದಲ್ಲಿ ಚಂದ್ರನ ಕೆಲವು ಪ್ರದೇಶಗಳಲ್ಲಿ ಜಲಜನಕ ಇರುವುದನ್ನು ಪತ್ತೆ ಮಾಡಲಾಗಿತ್ತು.

ಈಗ ಈ ನಿಟ್ಟಿನ ಸಂಶೋಧನೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ನಾಸಾ ವಿಜ್ಞಾನಿಗಳು ಸನ್‍ಲಿಟ್ (ಸೂರ್ಯ ಬೆಳಕು ಇರುವ ಪ್ರದೇಶ) ಇರುವ ಪ್ರದೇಶದಲ್ಲಿ ನೀರು ಇರುವುದನ್ನು ಅನ್ವೇಷಣೆ ಮಾಡಿದ್ದಾರೆ.

ಈವರೆಗೆ ನಡೆಸಲಾದ ಸಂಶೋಧನೆ ಪ್ರಕಾರ ಚಂದ್ರನ ಶೀತ ಮತ್ತು ನೆರಳಿರುವ ಮೇಲ್ಮೈಗಳಲ್ಲಿ ಮಾತ್ರ H2O ಕಂಡುಬಂದಿತ್ತು. ಉಳಿದ ಮೇಲ್ಮೈನಲ್ಲಿ ನೀರಿಗೆ ಸಂಬಂಧಿಸಿದ ರಾಸಾಯನಿಕ ವಸ್ತುಗಳಾದ ಹೈಡ್ರಾಕ್ಸಿನ್ (ಒಎಚ್) ಇರಬಹುದಾದ ಸಾಧ್ಯತೆ ಇತ್ತು.

ಈಗ ನಾಸಾ ವಿಜ್ಞಾನಿಗಳ ಸಂಶೋಧನೆಯಿಂದ ಚಂದಿರನ ದಕ್ಷಣ ಗೋಳಾರ್ಧದಲ್ಲಿ ನೀರು ಇರುವುದು ಪತ್ತೆಯಾಗಿದೆ. ಇದು ಮತ್ತಷ್ಟು ಹೊಸ ಸಂಶೋಧನೆಗೆ ಅನುವು ಮಾಡಿಕೊಟ್ಟಿದೆ.

Facebook Comments