ನ್ಯಾಷನಲ್ ಹೆರಾಲ್ಡ್ ಹಗರಣ : ಸೋನಿಯಾ, ರಾಹುಲ್ ಪ್ರತಿಕ್ರಿಯೆ ಕೋರಿದ ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.22 (ಪಿಟಿಐ)- ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ಸಂಸದ ರಾಹುಲ್ ಗಾಂಧಿ ಹಾಗೂ ಇತರ ಆರೋಪಿಗಳ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಉಚ್ಛ ನ್ಯಾಯಾಲಯ ಸೋಮವಾರ ಕೋರಿದೆ. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯಗಳನ್ನು ಸಲ್ಲಿಸಲು ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಆರೋಪಿಗಳಿಂದ ಪ್ರತಿಕ್ರಿಯೆ ಕೋರಿ ನಿರ್ದೇಶನ ನೀಡಿದೆ.

ಸೋನಿಯಾ, ರಾಹುಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡ ಮತ್ತು ಯಂಗ್ ಇಂಡಿಯಾ (ವೈಐ) ದಿಂದ ಏಪ್ರಿಲ್ 12ರೊಳಗೆ ಸುಬ್ರಮಣಿಯನ್ ಸ್ವಾಮಿ ಅವರ ಮನವಿಗೆ ತಮ್ಮ ನಿಲುವನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಸುರೇಶ್ ಕೈತ್ ಅವರು ನೋಟೀಸ್ ನೀಡಿದ್ದಾರೆ.

ಬಿಜೆಪಿ ಸಂಸದ ಸ್ವಾಮಿ ಅವರ ಪರ ವಕೀಲ ಸತ್ಯ ಸಭರ್ವಾಲ್ ಕೋರ್ಟ್ಗೆ ಹಾಜರಾಗಿದ್ದರೆ, ಗಾಂಧಿ ಕುಟುಂಬ ಮತ್ತು ಇತರರ ಪರ ವಕೀಲ ತರುಣ್ ಚೀಮಾ ಹಾಜರಾಗಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಷಯದಲ್ಲಿ ಹೈಕೋರ್ಟ್ ನೋಟೀಸ್ ನೀಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ವಿಚಾರಣಾ ನ್ಯಾಯಾಲದಲ್ಲಿ ವಿಚಾರಣೆಯನ್ನು ಏಪ್ರಿಲ್ 12ರವರೆಗೆ ತಡೆಹಿಡಿದಿದೆ ಎಂದು ಅವರು ದೃಢಪಡಿಸಿದರು.

ಈ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಹಾಗೂ ಕಾಂಗ್ರೆಸ್ ಮುಖಂಡರು ಕೇವಲ 50 ಲಕ್ಷ ರೂ. ಪಾವತಿಸುವ ಮೂಲಕ ಯಂಗ್ ಇಂಡಿಯಾ ಪ್ರೈ.ಲಿ., ಹಣವನ್ನು ವಂಚಿಸಲು ಹಾಗೂ ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ್ದರು.

ಇದರ ಮೂಲಕ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನಿಂದ ಯಂಗ್ ಇಂಡಿಯನ್ ಪ್ರೈ.ಲಿ. 90.25 ರೂ. ಪಡೆಯುವ ಹಕ್ಕು ಹೊಂದಿದೆ ಎಂದು ಬಿಜೆಪಿ ಮುಖಂಡರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಸೋನಿಯಾ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಏಳು ಮಂದಿ ಆರೋಪಿಗಳು ಇದನ್ನು ಅಲ್ಲಗೆಳೆದಿದ್ದಾರೆ.

Facebook Comments