2024 ರ ವೇಳೆಗೆ ಜಲಜೀವನ್ ಮಿಷನ್ ಯೋಜನೆ ಪೂರ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ರಾಜ್ಯದಲ್ಲಿ 2024ರ ವೇಳೆಗೆ ರಾಷ್ಟ್ರೀಯ ಜಲಜೀವನ್ ಮೀಷನ್ ಯೋಜನೆಯನ್ನು ಪೂರ್ಣಗೊಳಿಸಿ, ಪ್ರತಿ ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಧಾನ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಬಿ.ಎಲ್.ಕಾಂತರಾಜು ಅವರ ಪರವಾಗಿ ಜೆಡಿಎಸ್‍ನ ಶ್ರೀಕಂಠೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಜಲಜೀವನ್ ಮಿಷನ್ ಯೋಜನೆಯಡಿ 5045 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನೀರಿನ ಮೂಲ ಲಭ್ಯ ಇರುವ ಕಡೆಗಳಲ್ಲಿ ಯೋಜನೆ ತೀವ್ರಗೊಂಡಿದೆ.

ಇದರ ನಡುವೆ ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ಪ್ರಧಾನ ಮಂತ್ರಿ ಅವರು ಕ್ಯಾಚ್ ದಿ ರೈನ್ ಎಂಬ ಯೋಜನೆ ರೂಪಿಸಿದ್ದಾರೆ. ಅದರ ಅನುಷ್ಠಾನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದರು. ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಈ ಮೊದಲು ನೇಮಕವಾಗಿದ್ದ ಬಿಆರ್‍ಸಿ, ಸಿಆರ್‍ಸಿಗಳು ಕೆಲಸ ಬಿಟ್ಟು ಹೋಗಿದ್ದಾರೆ. ಕೆಲವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಿಗಾದರೂ ಕೆಲಸ ಇಲ್ಲ ಎಂದರೆ ಅವರನ್ನು ಬಿಆರ್‍ಸಿ, ಸಿಆರ್‍ಸಿಗಳನ್ನಾಗಿ ನೇಮಿಸಲು ಮಾನವೀಯತೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಜಾದಿ ಕಾ ಅಮೃತಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ 750 ಗ್ರಾಮ ಪಂಚಾಯತ್‍ಗಳನ್ನು ಅಮೃತ ಯೋಜನೆಯಡಿ ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತಿದೆ. ಆ ಯೋಜನೆಯನ್ನು ಸೆ.23ರಂದು ಉದ್ಘಾಟಿಸಲಾಗುತ್ತದೆ ಎಂದರು.

ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ಎಂಎ-ಆರ್‍ಡಿಪಿಆರ್ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಪ್ರಸ್ತಾಪನೆ ಪರಿಶೀಲನೆಯಲ್ಲಿದೆ ಎಂದು ಹೇಳಿದರು.

Facebook Comments