ಬಾಂಗ್ಲಾ- ಪಾಕ್ ದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸಿ: ಮಹಾರಾಷ್ಟ್ರ ಸಚಿವ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.23-ಪಾಕಿಸ್ತಾನ-ಭಾರತ ಗಡಿಭಾಗದಲ್ಲಿ ಪದೇ ಪದೇ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಎರಡೂ ದೇಶಗಳು ಸಾಮಾಜಿಕವಾಗಿ ವೈರಿಗಳಂತೆ ಕತ್ತಿ ಮಸೆಯುತ್ತಿವೆ. ಈ ಸಂದರ್ಭದಲ್ಲಿ ಹೊಸ ಬೇಡಿಕೆಯೊಂದು ಬಂದಿದ್ದು, ಬಾಂಗ್ಲಾ ದೇಶ, ಪಾಕಿಸ್ತಾನ ದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸಿ ಒಂದೇ ದೇಶ ಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದೆ.

ಮಹಾರಾಷ್ಟ್ರದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಮುಖಂಡ ಹಾಗೂ ಸಚಿವ ನವಾಬ್ ಮಲ್ಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಒಟ್ಟುಗೂಡಿ ಒಂದೇ ರಾಷ್ಟ್ರ ನಿರ್ಮಿಸುವುದಾದರೆ ಅದನ್ನು ಮುಕ್ತಕಂಠದಿಂದ ಸ್ವಾಗತಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಕರಾಚಿಯನ್ನು ಭಾರತದ ಜೊತೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದರು. ಆ ಕುರಿತಂತೆ ಪ್ರತಿಕ್ರಿಯಿಸಿರುವ ನವಾಬ್ ಮಲ್ಲಿಕ್, ಬಿಜೆಪಿ ಆಡಳಿತದಲ್ಲಿ ಮೂರು ದೇಶಗಳು ಒಗ್ಗೂಡುವುದಾದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಿಜೆಪಿಯವರು ಕೂಡಲೇ ಈ ಪ್ರಯತ್ನವನ್ನು ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಬೃಹನ್ ಮುಂಬೈ ಮುನ್ಸಿಪಲ್ ಕಾಪೆರ್ರೇಷನ್ ಚುನಾವಣೆಯಲ್ಲಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾ ವಿಕಾಸ್ ಅಘಡಿ ಮೈತ್ರಿ ಸ್ಪರ್ಧೆ ಮಾಡಲಿದೆ. ಈಗಾಗಲೇ ಸರ್ಕಾರ ರಚನೆ ಮಾಡಿದ್ದೇವೆ. ಅದೇ ರೀತಿ ಪಾಲಿಕೆ ಚುನಾವಣೆಯಲ್ಲೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಜಾರಿಗೊಳಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Facebook Comments