NCB ಅಧಿಕಾರಿ ವಿರುದ್ಧ ದಾಖಲೆ ಬಹಿರಂಗ ಪಡಿಸಿದ ಮಹಾರಾಷ್ಟ್ರ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.22- ಮಾದಕ ದ್ರವ್ಯಗಳ ನಿಗ್ರಹ ದಳ (ಎನ್‍ಸಿಬಿ) ಅಧಿಕಾರಿ ಸಮೀರ್ ವಾಂಕೇಡೆ ಅವರು ಇತ್ತೀಚೆಗೆ ತಮ್ಮ ಸಹೋದರಿಯೊಂದಿಗೆ ದುಬೈ ಪ್ರವಾಸ ಕೈಗೊಂಡಿರುವ ದಾಖಲೆಯನ್ನು ಮಹಾರಾಷ್ಟ್ರರದ ಸಚಿವ ನವಾಬ್ ಮಲ್ಲಿಕ್ ಬಹಿರಂಗ ಪಡಿಸಿದ್ದಾರೆ. ಎನ್‍ಸಿಪಿ ನಾಯಕರೂ ಆಗಿರುವ ನವಾಬ್ ಮಲ್ಲಿಕ್ ತಮ್ಮ ಟ್ವಿಟರ್‍ನಲ್ಲಿ ಸಮೀರ್ ಮತ್ತು ಅವರ ಸಹೋದರಿ ಯಾಸ್ಮೀನ್ ವಾಂಕೇಡೆ ಅವರು ಇರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಮೀರ್ ವಾಂಕೇಡೆ ಅವರು ಮಾಲ್ಡೀವ್ಸ್ ಪ್ರವಾಸ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ದುಬೈ ಪ್ರವಾಸ ಹೋಗಿರಲಿಲ್ಲ ಎಂದು ವಾದಿಸುತ್ತಿದ್ದಾರೆ. ಅವರು ಸಹೋದರಿಯೊಂದಿಗೆ ದುಬೈ ಪ್ರವಾಸ ಹೋಗಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. 2020ರ ಡಿಸೆಂಬರ್ 10ರಂದು ದುಬೈನ ಗ್ರಾಂಡ್ ಹಯಾತ್ ಹೋಟೇಲ್‍ನಲ್ಲಿ ಸಮೀರ್ ಕುಳಿತಿರುವ ಫೋಟೋಗಳನ್ನು ಯಾಸ್ಮೀನ್ ತಮ್ಮ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಮೀರ್ ಸುಳ್ಳು ಹೇಳುತ್ತಿರುವುದು ಬಹಿರಂಗ ಪಡಿಸುತ್ತವೆ ಎಂದು ಮಲ್ಲಿಕ್ ಆರೋಪಿಸಿದ್ದಾರೆ.

ಆದರೆ ಆರೋಪವನ್ನು ಅಲ್ಲಗಳೆದಿರುವ ಸಮೀರ್, ಸಚಿವರಾದ ನವಾಬ್ ಮಲ್ಲಿಕ್‍ರನ್ನು ನಾನು ಗೌರವಿಸುತ್ತೇನೆ. ಆದರೆ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳುಗಳನ್ನು ಹರಡುವುದನ್ನು ಸಹಿಸಲಾಗಲ್ಲ. ನಾನು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಪಡೆದು ಮಾಲ್ಡೀವ್ಸ್‍ಗೆ ಪ್ರವಾಸ ಹೋಗಿದ್ದೇನೆ. ಅದೇನು ಅಪರಾಧವಲ್ಲ. ಕುಟುಂಬದ ಜೊತೆ ಪ್ರವಾಸ ಹೋದಾಕ್ಷಣ ಬೇರೆಯವರಿಂದ ಹಣ ಸುಲಿಗೆ ಮಾಡಿದ್ದೇವೆ ಎಂದು ಅರ್ಥವಲ್ಲ ಎಂದಿದ್ದಾರೆ.

ನವಾಬ್ ಮಲ್ಲಿಕ್ ಅವರು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಹಣ ವಸೂಲಿ ಮಾಡಿ ದುಬೈ ಪ್ರವಾಸ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅದನ್ನು ಅವರು ಸಾಬೀತು ಪಡಿಸಬೇಕು. ನಾನು ಎಂದಿಗೂ ದುಬೈ ಪ್ರವಾಸ ಮಾಡಿಲ್ಲ ಎಂದು ಸಮೀರ್ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ ಮಾದಕ ವಸ್ತುಗಳ ಹಗರಣದಲ್ಲಿ ದಿನೇ ದಿನೇ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ನವಾಬ್ ಮಲ್ಲಿಕ್ ಅವರ ಅಳಿಯ ಸಮೀರ್ ಖಾನ್ ಮಾದಕ ವಸ್ತುಗಳ ಖರೀದಿ, ಕಳ್ಳ ಸಾಗಾಣಿಕೆ ಆರೋಪ ಹೊತ್ತಿದ್ದಾರೆ. ಇತ್ತೀಚೆಗೆ 197.6 ಕೆಜಿ ಗಾಂಜಾ ಹಾಗೂ 6 ಸಿಬಿಡಿ ಸ್ಪ್ರೇ ಸಾಗಾಟ ಹಾಗೂ ಕಳ್ಳ ಸಾಗಾಣಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿ, ಕೋರ್ಟ್‍ನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ.

ನವಾಬ್ ಮಲ್ಲಿಕ್ ಅವರು ಎನ್‍ಸಿಬಿ ಅಧಿಕಾರಿಗಳು ಜನರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಮುಂಬೈನಲ್ಲಿ ಹಣ ವಸೂಲಿ ಅಧಿಕಾರಗಳ ಜಾಲವಿದೆ. ಸಮೀರ್ ವಾಂಕೇಡೆ ಅವರು ಕೇಸರಿ ಪಕ್ಷದ ಜೊತೆ ಸೇರಿ ಅಮಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಜಾಲದ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಮಲ್ಲಿಕ್ ಇತ್ತೀಚೆಗೆ ಆಗ್ರಹಿಸಿದ್ದರು.

Facebook Comments