ಬಿಗ್ ಬ್ರೇಕಿಂಗ್ : ಮಹಾರಾಷ್ಟ್ರದ ಗಡ್‍ಚಿರೋಳಿಯಲ್ಲಿ ನಕ್ಸಲರ ದಾಳಿಯಲ್ಲಿ 15 ಯೋಧರು ಹುತಾತ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ಗಡ್‍ಚಿರೋಳಿ, ಮೇ 1- ಮಹಾರಾಷ್ಟ್ರದ ನಕ್ಸಲ್ ಉಪಟಳವಿರುವ ಗಡ್‍ಚಿರೋಳಿ ಜಿಲ್ಲೆಯಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಹೆದ್ದಾರಿಯಲ್ಲಿ ನಕ್ಸಲರು ನೆಲಬಾಂಬ್ ಸ್ಫೋಟಿಸಿ ನಡೆಸಿದ ವಿಧ್ವಂಸಕ ಕೃತ್ಯದಲ್ಲಿ 15 ಯೋಧರು ಹತರಾಗಿದ್ದು , ಅನೇಕರು ಗಾಯಗೊಂಡಿದ್ದಾರೆ.

ಯೋಧರಿದ್ದ ವಾಹನ ತೆರಳುತ್ತಿದ್ದ ಮಾರ್ಗದ ಮಧ್ಯೆ ಉಗ್ರರು ದೊಡ್ಡ ಕಲ್ಲುಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಯೋಧರು ವಾಹನದಿಂದ ಕೆಳಗಿಳಿದು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಮರೆಯಲ್ಲಿ ಅವಿತಿಟ್ಟುಕೊಂಡಿದ್ದ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದರು.

ಇದೇ ಸಂದರ್ಭದಲ್ಲಿ ಯೋಧರು ಮತ್ತು ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ 15 ಯೋಧರು ಹುತಾತ್ಮರಾಗಿ ತೀವ್ರತೆಗೆ ವಾಹನ ನಜ್ಜುಗುಜ್ಜಾಗಿದೆ.

ಇದು ಫೆ.10ರಂದು ಪುಲ್ವಾಮಾದಲ್ಲಿ ನಡೆದ ಜೈಷ್ ಉಗ್ರರ ಭೀಕರ ವಿಧ್ವಂಸಕ ದಾಳಿಯನ್ನು ನೆನಪಿಸುವಂತಿತ್ತು. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಹತರಾದರು.

30 ವಾಹನಗಳು ಭಸ್ಮ: ಈ ಮಧ್ಯೆ ಇದೇ ಜಿಲ್ಲೆಯಲ್ಲಿ ಹವೇಲ್ ಗಾಂವ್ ಗ್ರಾಮದ ಬಳಿ ನಕ್ಸಲರು ದಾಳಿ ನಡೆಸಿ 30 ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ನಿನ್ನೆ ರಾತ್ರಿ ನಡೆದ ಈ ದಾಳಿಯಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಮಹಾರಾಷ್ಟ್ರದ ನಿರ್ಮಾಣ ಸಂಸ್ಥೆಗೆ ಸೇರಿದ್ದ ವಾಹನಗಳು ಸೇರಿದಂತೆ 30 ವಾಹನಗಳನ್ನು ನಕ್ಸಲರು ಸುಟ್ಟು ಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕ್ಸಲರ ದಾಳಿಯಿಂದಾಗಿ ಕೋಟ್ಯತರ ರೂಪಾಯಿ ನಷ್ಟ ಸಂಭವಿಸಿದೆ.

ರಸ್ತೆ ನಿರ್ಮಾಣ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಇದೇ ಸ್ಥಳದಲ್ಲಿ ಕಳೆದ ವರ್ಷ ನ.31ರಂದು ನಕ್ಸಲರ ಗುಂಪು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸರಕುಗಳಿದ್ದ ವಾಹನಗಳನ್ನು ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದರು.

Facebook Comments

Sri Raghav

Admin