ನಾಲ್ವರು ಗ್ರಾಮಸ್ಥರನ್ನು ಹತ್ಯೆ ಮಾಡಿ ಅಟ್ಟಹಾಸ ಮೆರೆದ ನಕ್ಸಲರು..!

ಈ ಸುದ್ದಿಯನ್ನು ಶೇರ್ ಮಾಡಿ

ರಾಯ್ಪುರ, ಸೆ.6-ಛತ್ತೀಸ್‍ಗಢದ ವಿವಿಧ ಜಿಲ್ಲೆಗಳಲ್ಲಿ ನಕ್ಸಲರ ಹಿಂಸಾಕೃತ್ಯದ ಅಟ್ಟಹಾಸ ಮುಂದುವರೆದಿದೆ. ಬಿಜಾಪುರ್ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರೆಂಬ ಸಂಶಯದ ಮೇಲೆ ಮಾವೋವಾದಿಗಳು ನಾಲ್ವರು ಗ್ರಾಮಸ್ಥರನ್ನು ಕೊಂದಿದ್ದಾರೆ.

ಅಲ್ಲದೇ ಹಲವು ಹಳ್ಳಿಗರನ್ನು ಮರಣಾಂತಿಕವಾಗಿ ಥಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಿಜಾಪುರ್ ಜಿಲ್ಲೆಯ ಗಂಗ್ಲೂರ್ ಪೊಲೀಸ್ ಠಾಣೆ ದುಮ್ರಿ-ಪಲ್ನರ್ ಗ್ರಾಮಗಳ ನಡುವಣ ಅರಣ್ಯ ಪ್ರದೇಶದಲ್ಲಿ ಈ ನರಮೇಧ ನಡೆದಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ (ಬಸ್ತಾರ್ ವಲಯ) ಪಿ. ಸುಂದರ್ ರಾಜ್ ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಗ್ರಾಮಗಳಿಗೆ ನುಗ್ಗಿದ ನಕ್ಸಲರು ಕೆಲವು ಗ್ರಾಮಸ್ಥರನ್ನು ತಮ್ಮೊಂದಿಗೆ ಅರಣ್ಯಕ್ಕೆ ಕರೆದೊಯ್ದರು. ಈ ಗ್ರಾಮಸ್ಥರು ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದರು. ಅರಣ್ಯದಲ್ಲಿ ಹಳ್ಳಿಗರ ಗುಂಪಿನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ ನಕ್ಸಲರು, ಪೊಲೀಸ್ ಮಾಹಿತಿದಾರರೆಂಬ ಗುಮಾನಿ ಮೇರೆಗೆ ನಾಲ್ವರನ್ನು ಹತ್ಯೆ ಮಾಡಿದರು.

ಪುನೇಮ್ ಸನ್ನು, ಗೋರೆ ಸನ್ನು ಅಲಿಯಾಸ್ ಧೃವ, ಆಯಿಟು ಅಲಿಯಾಸ್ ಫಲ್ಲಿ ಮತ್ತು ಬುಶ್ಕು ಅಲಿಯಾಸ್ ತುಳಸಿ-ಬಂಡುಕೋರರ ಕ್ರೌರ್ಯಕ್ಕೆ ಬಲಿಯಾದ ಗ್ರಾಮಸ್ಥರು ಎಂದು ಐಜಿಪಿ ಸುಂದರ್‍ರಾಜ್ ತಿಳಿಸಿದ್ದಾರೆ. ಇವರೆಲ್ಲರೂ ಪುಸ್ನರ್ ಮತ್ತು ಮೆಟಪಲ್ ಗ್ರಾಮದವರು.

ನಕ್ಸಲರು ಕೆಲವು ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.  ಹತ್ಯಾಕಾಂಡದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  ಕಳೆದ ಕೆಲವು ದಿನಗಳಿಂದ ಬಸ್ತಾರ್ ವಲಯದಲ್ಲಿ ಗ್ರಾಮಸ್ಥರ ಮೇಲೆ ನಕ್ಸಲರ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.

ದಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಕ್ಸಲರು ಪೊಲೀಸ್ ಮಾಹಿತಿದಾರರೆಂಬ ಶಂಕೆ ಮೇರೆಗೆ ಇಬ್ಬರು ಗ್ರಾಮಸ್ಥರನ್ನು ಕೊಂದು ಅವರ ಜೊತೆಯಲ್ಲಿದ್ದವರ ಮೇಲೆ ಮಾರಕ ದಾಳಿ ನಡೆಸಿ ತೀವ್ರ ಗಾಯಗೊಳಿಸಿದ್ದರು.  ಕಳೆದ ತಿಂಗಳು ದಂತೇವಾಡ ಜಿಲ್ಲೆಯ ಚಿಕ್ಕಪಲ್ ಮತ್ತು ಪರ್ಚೆಲಿ ಗ್ರಾಮಗಳಿಗೆ ನುಗ್ಗಿದ ನಕ್ಸಲರು ಮಹಿಳೆಯರು, ವೃದ್ಧರೂ ಸೇರಿದಂತೆ ಹಲವಾರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು.

Facebook Comments